ನನ್ನ ಅಂತ್ಯಸಂಸ್ಕಾರಕ್ಕೆ ಬನ್ನಿ- ಸಿಎಂಗೆ ಸೆಲ್ಫಿ ವಿಡಿಯೋ ಮಾಡಿ ರೈತ ಆತ್ಮಹತ್ಯೆ

Public TV
1 Min Read

ಮಂಡ್ಯ: ತನ್ನ ಅಂತ್ಯ ಸಂಸ್ಕಾರಕ್ಕೆ ಮುಖ್ಯಮಂತ್ರಿ ಅವರು ಬರುವಂತೆ ವಿಡಿಯೋ ಮಾಡಿ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ, ಸಂತೇಬಾಚಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ನಡೆದಿದೆ.

ಸುರೇಶ್ (45) ಆತ್ಮಹತ್ಯೆಗೆ ಶರಣಾದ ರೈತರಾಗಿದ್ದಾರೆ. ಸಾಲಬಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತ ಸುರೇಶ್ ಅವರು ಸಿಎಂ ಅಭಿಮಾನಿಯೂ ಆಗಿದ್ದು, ರೈತರನ್ನು ಕಾಪಾಡಿ ಎಂದು ಮನವಿ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೈತನ ಮನವಿ ಏನು?
ವಿಡಿಯೋದಲ್ಲಿ ಈ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸುವ ರೈತ ಸುರೇಶ್ ಅವರು, ಕರ್ನಾಟಕ ಜನಪ್ರಿಯ ಸಿಎಂ ಆಗಿರುವ ನೀವು ನನ್ನ ಅಂತಿಮ ದರ್ಶನಕ್ಕೆ ಬರಬೇಕು. ಈ ವೇಳೆ ಕೇವಲ ಆಶ್ವಾಸನೆಯನ್ನು ನೀಡದೆ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಂಬಿಕೆ ಹೊಂದಿದ್ದೇನೆ. ಈ ಭಾಗದಲ್ಲಿ ಮೊದಲು 150 ಅಡಿಗೆ ನೀರು ಲಭ್ಯವಾಗುತ್ತಿತ್ತು. ಆದರೆ ಈಗ 1,500 ಅಡಿ ಕೊಳವೆ ಬಾವಿ ಕೊರೆದರು ನೀರು ಸಿಗುತ್ತಿಲ್ಲ. ಈ ಭಾಗದ ಕೆರೆ ಕುಂಟೆಗಳನ್ನು ತುಂಬುವಂತೆ ಮಾಡಿ ರೈತರ ಸಮಸ್ಯೆ ಬಗೆ ಹರಿಸಿ. ಈ ಭಾಗದಲ್ಲಿ ಕೆಲ ವರ್ಷಗಳಿಂದ ಬರಗಾಲ ಇರುವುದರಿಂದ ಹೆಚ್ಚಿನ ಸಮಸ್ಯೆ ಆಗಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡದೆ ನೀರು ಕೊಟ್ಟು ನ್ಯಾಯ ನೀಡಿ ಎಂದು ಮನವಿ ಮಾಡಿದ್ದಾರೆ.

ಜಿಲ್ಲೆಯ ಸಂತೇಬಾಚಹಳ್ಳಿ ಹೋಬಳಿಯ ಎಲ್ಲ ಕೆರೆಗಳಿಗೆ ನೀರು ತುಂಬಿಸಿ, ರೈತರನ್ನು ಕಾಪಾಡಿ ಆ ಮೂಲಕ ಸಮ್ಮಿಶ್ರ ಸರ್ಕಾರದ ಸಾಧನೆಯನ್ನು ಮಾಡಲಿ ಎಂಬುವುದು ರೈತರ ಮನವಿ ಆಗಿದೆ. ಅಂದಹಾಗೇ ಭಾನುವಾರ ಬೆಳಗ್ಗೆ ಜಮೀನಿನ ಬಳಿ ರೈತ ಸುರೇಶ್ ಅವರು ನೇಣು ಬಿಗುದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಅಂತ್ಯ ಸಂಸ್ಕಾರವನ್ನು ನಡೆಸಲಾಗಿದೆ. ಆ ಬಳಿಕ ವಿಡಿಯೋ ಕುಟುಂಬಸ್ಥರ ಕೈಗೆ ಲಭಿಸಿದೆ. ಕೆಆರ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *