ಟ್ರೇಲರ್ ಮೂಲಕ ನಡುಕ ಹುಟ್ಟಿಸಿದ ನಿಗೂಢ ಮನರೂಪ!

Public TV
1 Min Read

ಬೆಂಗಳೂರು: ಕಿರಣ್ ಹೆಗ್ಡೆ ನಿರ್ದೇಶನದಲ್ಲಿ ಮೂಡಿ ಬಂದು ಇದೇ ನವೆಂಬರ್ 22ರಂದು ಬಿಡುಗಡೆಯಾಗಲಿರೋ ಚಿತ್ರ ಮನರೂಪ. ಈ ಹಿಂದೆ ಟೈಟಲ್ ಪೋಸ್ಟರ್ ಮೂಲಕವೇ ಗಮನ ಸೆಳೆದಿದ್ದ ಈ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ.

ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಚಿತ್ರ ವಿಭಿನ್ನ ಕಥೆ ಹೊಂದಿದೆ ಎಂಬ ವಿಚಾರ ಟೈಟಲ್ ಪೋಸ್ಟರ್ ಮೂಲಕವೇ ಅನಾವರಣಗೊಂಡಿತ್ತು. ಕಾರೊಂದು ಕಾಡಿನ ನಡುವೆ ಗೀರು ಮೂಡಿಸಿಕೊಂಡು ಹೋದಂತಹ ದೃಶ್ಯದ ಮೂಲಕವೇ ಚಿತ್ರತಂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶ ಕಂಡಿತ್ತು. ಈಗ ಟ್ರೇಲರ್‍ನೊಂದಿಗೆ ಅನಾವರಣಗೊಂಡಿರೋದು ನಡುಕ ಹುಟ್ಟಿಸುವ ನಿಗೂಢ ಮನರೂಪ!

ಕಾಡೆಂದರೇನೇ ನಿಶ್ಯಬ್ದ. ಅದರಾಳದಲ್ಲಿ ನಾನಾ ನಿಗೂಢಗಳಿವೆ. ಅಂತಹ ಕಾಡು, ಅದರೊಳಗಿರೋ ಕರಡಿ ಗುಹೆಯೆಂಬ ಭಯಾನಕ ಪ್ರದೇಶದ ಸುತ್ತ ಸುಳಿದಾಡುವ ಕಥೆಯ ಜಾಡಿನೊಂದಿಗೆ ನಿಜಕ್ಕೂ ಈ ಟ್ರೇಲರ್ ತುಂಬಾನೇ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಹತ್ತು ವರ್ಷಗಳ ನಂತರ ಜೊತೆಗೂಡೋ ಸ್ನೇಹಿತರು ಅತ್ಯಂತ ಅಪಾಯಕಾರಿಯಾದ ಪ್ರದೇಶಕ್ಕೆ ಚಾರಣ ಹೋದಾಗ ಅಲ್ಲೆದುರಾಗೋ ಸನ್ನಿವೇಶಗಳನ್ನು ಒಂದು ಜನರೇಷನ್ನಿನ ಮನೋಲೋಕದೊಂದಿಗೆ ತೆರೆದಿಡೋದು ಈ ಸಿನಿಮಾದ ಸ್ಪೆಷಾಲಿಟಿ.

ಒಂದು ತಂಡ ಚಾರಣ ಹೊರಟಾಗ ಅಲ್ಲಿ ಜರುಗೋ ಸನ್ನಿವೇಶಗಳನ್ನು ಕಟ್ಟಿಕೊಡುವಂತಹ ಸಾಕಷ್ಟು ಸಿನಿಮಾಗಳು ತೆರೆ ಕಂಡಿವೆ. ಆದರೆ ಮನರೂಪ ಅಪರೂಪದ ಕಂಟೆಂಟು ಹೊಂದಿರೋ ಸಿನಿಮಾ ಅನ್ನೋದಕ್ಕೆ ಈ ಟ್ರೇಲರ್ ಸಾಕ್ಷಿಯಂತಿದೆ. ಸಿ.ಎಂ.ಸಿ.ಆರ್. ಮೂವೀಸ್ ನಿರ್ಮಾಣ ಮಾಡಿರುವ ಮನರೂಪ ಸಿನಿಮಾದಲ್ಲಿ ಎಲ್ಲಾ ಕಲಾವಿದರೂ ಹೊಸಬರೇ. ಅದಕ್ಕೆ ತಕ್ಕುದಾದ ಈ ಕಥೆಗಾಗಿ ಚಿತ್ರೀಕರಣದ ಪೂರ್ವದಲ್ಲಿ ಹದಿನೈದು ದಿನಗಳ ಕಾಲ ಅಭಿನಯ ತಾಲೀಮು ನಡೆಸಲಾಗಿದೆ. ಉತ್ತರಕನ್ನಡದ ಶಿರಸಿ, ಸಿದ್ದಾಪುರ ಭಾಗಗಳಲ್ಲಿ ಮನರೂಪ ಚಿತ್ರೀಕರಣ ಮಾಡಲಾಗಿದೆ.

ಮುಖ್ಯ ಭೂಮಿಕೆಯಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್ ಅಭಿನಯಿಸಿದ್ದಾರೆ. ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರು ಅಭಿನಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *