ಹೋಟೆಲ್‌ ಒಳಗೆ ಕುಳಿತಿದ್ದವನ ಮೇಲೆ ಗುಂಡು ಹಾರಿಸಿ, ಮಚ್ಚಿನಿಂದ ಕೊಚ್ಚಿದ್ರು!

By
1 Min Read

ಮುಂಬೈ: ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯನ್ನು 8 ಮಂದಿ ದುಷ್ಕರ್ಮಿಗಳ ತಂಡವು ಮಾರಣಾಂತಿಕವಾಗಿ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.

ಮೃತನನ್ನು ಅವಿನಾಶ್ ಧನ್ವೆ (31) ಎಂದು ಗುರುತಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದಾಪುರ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಹಳೆಯ ದ್ವೇಷದಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಟಿವಿಯಲ್ಲಿ ಏನಿದೆ..?: ಅವಿನಾಶ್ ಧನ್ವೆ ಸಹಿತ ನಾಲ್ವರು ಪುಣೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್ ಜಗದಂಬಾದಲ್ಲಿ ಕುಳಿತಿರುತ್ತಾರೆ. ಧನ್ವೆ ಫೋನಿನಲ್ಲಿ ಮಾತನಾಡುತ್ತಿರುತ್ತಾನೆ. ಈ ವೇಳೆ ಇಬ್ಬರು ಬಂದು ಏಕಾಏಕಿ ಧನ್ವೆ ಮೇಲೆ ಗುಂಡಿನ ಸುರಿಮಳೆಗೈಯುತ್ತಾರೆ. ಇದರಿಂದ ಉಳಿದ ಮೂವರು ಗಾಬರಿಗೊಂಡು ಅಲ್ಲಿಂದ ಎಸ್ಕೇಪ್‌ ಆಗುತ್ತಾರೆ. ಇತ್ತ ಮತ್ತೆ 3-4 ಮಂದಿ ಓಡೋಡಿ ಬಂದು ಮಚ್ಚಿನಿಂದ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಾರೆ. ಪರಿಣಾಮ ಧನ್ವೆ ಸ್ಥಳದಲ್ಲಿಯೇ ಸಾವನ್ನಪ್ಪುತ್ತಾನೆ. ಇದನ್ನೂ ಓದಿ: ಬೀದರ್‌ನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ- ನಾನಾ ಅವಾಂತರ ಸೃಷ್ಠಿ

ಇತ್ತ ಧನ್ವೆ ಸಾವನ್ನಪ್ಪುತ್ತಿದ್ದಂತೆಯೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗುವುದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ. ಐದರಿಂದ ಆರು ಮಂದಿ ಕಾರಿನಲ್ಲಿ ಬಂದು ಹೋಟೆಲ್‌ಗೆ ಧಾವಿಸಿ ಕೃತ್ಯ ಎಸಗಿರುವುದು ಸಿಸಿಟಿವಿಯಿಂದ ಬಯಲಾಗಿದೆ. ಸದ್ಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಸಿಸಿಟಿವಿ ದೃಶ್ಯಗಳ ಮೂಲಕ 8 ಮಂದಿ ದುಷ್ಕರ್ಮಿಗಳನ್ನು ಗುರುತಿಸಿದ್ದೇವೆ. ಸದ್ಯ ಅವರನ್ನು ಬಂಧಿಸಲು ತಂಡಗಳನ್ನು ರಚಿಸಿದ್ದೇವೆ ಎಂದು ಪುಣೆ ಗ್ರಾಮಾಂತರ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Share This Article