ಕಾರು ಅಪಘಾತದಲ್ಲಿ ರಿಷಭ್‌ ಪಂತ್‌ ಉಳಿಸಿದ್ದ ವ್ಯಕ್ತಿ ಪ್ರೇಯಸಿ ಜೊತೆ ಆತ್ಮಹತ್ಯೆಗೆ ಯತ್ನ – ಪ್ರಿಯತಮೆ ಸಾವು

Public TV
1 Min Read

– ಪ್ರೀತಿಸಿದ್ದ ಜೋಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಲಕ್ನೋ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಷಭ್‌ ಪಂತ್‌ (Rishabh Pant) ಉಳಿಸಿದ್ದ ವ್ಯಕ್ತಿ ಮತ್ತು ಆತನ ಪ್ರೇಯಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿತ್ತು. ಈ ವೇಳೆ ಪ್ರಿಯತಮೆ ಮೃತಪಟ್ಟಿದ್ದಾಳೆ.

2022 ರಲ್ಲಿ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಅವರ ಕಾರು ಅಪಘಾತವಾಗಿತ್ತು. ಅವರ ಜೀವವನ್ನು ಉಳಿಸಿದ್ದ 25 ವರ್ಷದ ಯುವಕ ರಜತ್ ಕುಮಾರ್, ಫೆ.9 ರಂದು ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಬುಚ್ಚಾ ಬಸ್ತಿ ಎಂಬ ಹಳ್ಳಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.

ಕುಮಾರ್ ಮತ್ತು 21 ವರ್ಷದ ಗೆಳತಿ ಮನು ಕಶ್ಯಪ್ ಇವರಿಬ್ಬರ ಪ್ರೀತಿಗೆ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ, ಇಬ್ಬರೂ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಕಶ್ಯಪ್ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾಳೆ. ಕುಮಾರ್ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾನೆ.

ಬೇರೆ ಬೇರೆ ಜಾತಿಯವರಾದ ಕಾರಣ ಮನೆಯವರು ಒಪ್ಪಿರಲಿಲ್ಲ. ಎರಡೂ ಕುಟುಂಬಗಳು ಬೇರೆಡೆ ವಿವಾಹಗಳನ್ನು ನಿಶ್ಚಯ ಮಾಡಿಕೊಂಡಿದ್ದವು. ಇದು ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದೆ. ಕುಮಾರ್‌ ವಿರುದ್ಧ ಕಶ್ಯಪ್‌ ತಾಯಿ ಗಂಭೀರ ಆರೋಪ ಮಡಿದ್ದಾರೆ.

2022ರ ಡಿಸೆಂಬರ್‌ನಲ್ಲಿ ರಿಷಭ್‌ ಪಂತ್‌ ದೆಹಲಿಯಿಂದ ಉತ್ತರಾಖಂಡಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿತ್ತು. ಆಗ ಕ್ರಿಕೆಟಿಗನನ್ನು ರಕ್ಷಿಸುವಲ್ಲಿ ಕುಮಾರ್‌ ಪ್ರಮುಖ ಪಾತ್ರ ವಹಿಸಿದ್ದ.

Share This Article