ಫೇಸ್‍ಬುಕ್ ಬಳಸುವ ಗಂಡಸರೇ ಎಚ್ಚರ- ಅಂದವಾದ ಹುಡುಗೀರ ಫೋಟೋಗಳೇ ಬಂಡವಾಳ

Public TV
2 Min Read

– ಆರೋಪಿಯಿಂದ 3.5 ಲಕ್ಷ ಹಣ ವಶ

ಕಲಬುರಗಿ: ಹುಡಗಿಯರೇ ಫೇಸ್‍ಬುಕ್‍ನಲ್ಲಿ ಒಳ್ಳೊಳ್ಳೆಯ ಫೋಟೋಗಳನ್ನು ಹಾಕುವ ಮುನ್ನ ಒಂದು ಸಾರಿ ಯೋಚನೆ ಮಾಡಿ. ನಿಮಗೆ ಗೊತ್ತಿಲ್ಲದೆ ನಿಮ್ಮ ಫೋಟೋಗಳನ್ನ ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡೋ ಖತರ್ನಾಕ್ ಟೀಮ್ ಆ್ಯಕ್ಟಿವ್ ಆಗಿದ್ದು, ಸುಂದರವಾದ ಹುಡುಗಿಯರ ಫೋಟೋ ಕಂಡು ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋ ಗಂಡಸರೇ ಇವರ ಟಾರ್ಗೆಟ್ ಆಗಿದೆ.

ಹೌದು. ಕಲಬುರಗಿ ನಿವಾಸಿ ರಘುವೀರ್ ಈ ರೀತಿಯ ಹುಡುಗಿಯರ ಫೋಟೋ ತೋರಿಸಿ ಹಣ ವಸೂಲಿ ಮಾಡುವ ಖತರ್ನಾಕ್ ಖದೀಮ. ಎಂಜನಿಯರಿಂಗ್, ಎಂಬಿಎ ಮುಗಿಸಿಕೊಂಡಿರೋ ರಘುವೀರ್, ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರೋದು ಬಿಟ್ಟು ಸುಲಭವಾಗಿ ದುಡ್ಡು ಮಾಡೋಕೆ ಹೋಗಿ ಈಗ ಜೈಲು ಪಾಲಾಗಿದ್ದಾನೆ.

ಗೂಗಲ್ ಮುಖಾಂತರ ಚಂದ ಚಂದದ ಹುಡುಗಿಯರ ಫೋಟೋ ತೆಗೆದುಕೊಂಡು ನಕಲಿ ಫೇಸ್‍ಬುಕ್ ಅಕೌಂಟ್ ಕ್ರಿಯೇಟ್ ಮಾಡುವ ಈತ ಬೇರೆಯವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಬಳಿಕ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಬಳಿಕ ಆನ್‍ಲೈನ್ ಜಾಬ್ ಲಿಂಕ್ ಕಳುಹಿಸಿ ಅದರ ಬಗ್ಗೆ ಪುಸಲಾಯಿಸಿ ಹಣವನ್ನ ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಳ್ಳುತ್ತಿದ್ದ. ನಂತರ ಕೆಲಸ ಕೊಡಿಸದಿದ್ದಾಗ ಹಣ ವಾಪಸ್ ಕೊಡುವಂತೆ ಹಣ ನೀಡಿದವರು ಕೇಳಿದರೆ ಅವರನ್ನೇ ರಘುವೀರ್ ಹೆದರಿಸುತ್ತಿದ್ದ. ಅಷ್ಟೇ ಅಲ್ಲ ಮತ್ತೊಂದು ನಂಬರಿನಿಂದ ಅವರಿಗೆ ಕರೆ ಮಾಡಿ ತಾನು ಸೈಬರ್ ಪೊಲೀಸ್ ಇನ್‍ಸ್ಪೆಕ್ಟರ್ ವಿಜಯ್ ಎಂದು ಸುಳ್ಳು ಹೇಳಿ ಪರಿಚಯಿಸಿಕೊಂಡು ನಿಮ್ಮ ವಿರುದ್ಧ ದೂರು ಬಂದಿದೆ ಅಂತ ಹೇಳಿ ಮತ್ತೆ ಹಣ ವಸೂಲಿ ಮಾಡುತ್ತಿದ್ದನು.

ಹೀಗೆ ಆನ್‍ಲೈನ್ ಜಾಬ್ ಕೊಡಿಸ್ತೀನಿ ಎಂದು ಪಂಗನಾಮ ಹಾಕಿ ರಘುವೀರ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವರಿಗೆ ಮೋಸ ಮಾಡಿದ್ದಾನೆ. ಕೆಲದಿನಗಳ ಹಿಂದೆ ಕಲಬುರಗಿಯ ಕೆಎಸ್‌ಆರ್‌ಪಿ ಸಬ್ ಇನ್‍ಸ್ಪೆಕ್ಟರ್ ಒಬ್ಬರಿಗೆ ಪ್ರಿಯಾ ಶೆಟ್ಟಿ ಎಂಬ ಹೆಸರಿನಿಂದ ಪರಿಚಯ ಮಾಡಿಕೊಂಡು ಹಣ ವಸೂಲಿ ಮಾಡಿದ್ದನು. ಈ ವಿಚಾರ ತಿಳಿದ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನ ಕಂಬಿ ಹಿಂದೆ ಕಳುಹಿಸಿದ್ದಾರೆ. ಬಂಧಿತನಿಂದ ಸುಮಾರು 3.5 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.

ಸೋಷಿಯಲ್ ಮೀಡಿಯಾವನ್ನ ದುರ್ಬಳಕೆ ಮಾಡಿಕೊಂಡು ಹಣ ಮಾಡಬಹುದು ಅಂದುಕೊಂಡಿದ್ದ ರಘುವೀರ್ ಸದ್ಯ ಅಂದರ್ ಆಗಿದ್ದಾನೆ. ಆದರೆ ಗೊತ್ತಿಲ್ಲದ ಹುಡುಗಿಯ ಹೆಸರಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದರೆ ಅಕ್ಸೆಪ್ಟ್ ಮಾಡೋಕೂ ಮುಂಚೆ ಒಂದು ಸಾರಿ ಯೋಚನೆ ಮಾಡಿ ಬಳಿಕ ಅಪರಿಚಿತರ ಜೊತೆ ಸ್ನೇಹ ಬೆಳೆಸೋದು ಒಳ್ಳೆಯದು.

Share This Article
Leave a Comment

Leave a Reply

Your email address will not be published. Required fields are marked *