ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಹುಚ್ಚಾಟ – ತುರ್ತು ನಿರ್ಗಮನ ದ್ವಾರ ತೆಗೆಯಲು ವ್ಯಕ್ತಿ ಪ್ರಯತ್ನ

Public TV
1 Min Read

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಿಂದ (Delhi) ಬೆಂಗಳೂರಿಗೆ (Bengaluru) ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಪ್ರಯಾಣಿಕನೊಬ್ಬ ಕಂಠಪೂರ್ತಿ ಕುಡಿದು ನಶೆಯಲ್ಲಿ ಹುಚ್ಚಾಟ ಮೆರೆದಿದ್ದಾನೆ. ವಿಮಾನ ಹಾರಾಟದ ವೇಳೆಯೇ ತುರ್ತು ನಿರ್ಗಮನ ದ್ವಾರವನ್ನು (Emergency Exit) ತೆರೆಯಲು ಪ್ರಯತ್ನಿಸಿದ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

ವರದಿಗಳ ಪ್ರಕಾರ ಘಟನೆ ಶುಕ್ರವಾರ ಬೆಳಗ್ಗೆ 7:56ರ ವೇಳೆಗೆ ವಿಮಾನ ಸಂಖ್ಯೆ 6E 308 ರಲ್ಲಿ ನಡೆದಿದೆ. ಆರೋಪಿಯನ್ನು ಪ್ರತೀಕ್ (40) ಎಂದು ಗುರುತಿಸಲಾಗಿದೆ. ಆತ ಕಂಠಪೂರ್ತಿ ಮದ್ಯಪಾನ ಮಾಡಿ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಮನೆಮುಂದೆ ನಿಲ್ಲಿಸಿದ್ದ ಕಾರನ್ನು ಹೆದ್ದಾರಿಗೆ ತಳ್ಳಿಕೊಂಡು ಬಂದ ಕಾಡಾನೆ

ಪ್ರಯಾಣಿಕನ ನಡತೆ ಕಂಡು ತಕ್ಷಣವೇ ಎಚ್ಚೆತ್ತ ವಿಮಾನದ ಸಿಬ್ಬಂದಿ ಈ ಬಗ್ಗೆ ಕ್ಯಾಪ್ಟನ್‌ಗೆ ಮಾಹಿತಿ ನೀಡಿದ್ದಾರೆ. ಆತನನ್ನು ತಡೆದು, ವಿಮಾನ ಬೆಂಗಳೂರಿಗೆ ಬಂದಿಳಿದ ಬಳಿಕ ಸಿಐಎಸ್‌ಎಫ್ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಯಾಣಿಕನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಘಟನೆ ಬಗ್ಗೆ ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಇಂತಹ ಘಟನೆ ವರದಿಯಾಗಿರುವುದು ಇದು ಮೊದಲೇನಲ್ಲ. ಈ ಹಿಂದೆ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಲ್ಯಾಂಡಿಂಗ್ ಆಗುವುದಕ್ಕೂ ಮೊದಲೇ ತುರ್ತು ನಿರ್ಗಮದ ದ್ವಾರವನ್ನು ತೆಗೆಯಲು ಪ್ರಯತ್ನಿಸಿದ್ದ. ಆತನ ವಿರುದ್ಧವೂ ಎಫ್‌ಐಆರ್ ದಖಲಿಸಲಾಗಿತ್ತು. ಇದನ್ನೂ ಓದಿ: Twitter logo – ನಾಯಿ ಹೋಯ್ತು, ಮತ್ತೆ ನೀಲಿ ಹಕ್ಕಿ ಬಂತು


Share This Article