ಬಾಡಿಗೆ ಹಣ ಪಾವತಿಸದ್ದಕ್ಕೆ ತಹಶೀಲ್ದಾರ್ ವಾಹನದ ಕೆಳಗೆ ಮಲಗಿದ ಕಾರು ಚಾಲಕ

Public TV
1 Min Read

ಚಾಮರಾಜನಗರ: ವಿಧಾನಸಭಾ ಚುನಾವಣೆ ಕೆಲಸಕ್ಕೆ ಬಾಡಿಗೆಗೆ ಕಾರು ವಾಹನ ಬಳಸಿಕೊಂಡು ಹಣ ಪಾವತಿ ಮಾಡದ ಅಧಿಕಾರಿಗಳ ವಿರುದ್ಧ ಚಾಲಕನೊಬ್ಬ ಚಾಮರಾಜನರದ ಯಳಂದೂರಿನಲ್ಲಿ ವಿಶೇಷವಾಗಿ ಪ್ರತಿಭಟನೆ ಮಾಡಿದ್ದಾರೆ.

ಚಾಮರಾಜನಗರ ನಿವಾಸಿ ಮಹೇಶ್ ಎಂಬವರು 2018ರ ವಿಧಾನಸಭಾ ಚುನಾವಣೆ ಕೆಲಸಕ್ಕೆ ತಮ್ಮ ಕಾರನ್ನು ಬಾಡಿಗೆಗೆ ಬಿಟ್ಟಿದ್ದರು. ಯಳಂದೂರು ತಹಶೀಲ್ದಾರರು ಕಾರು ಬಳಸಿಕೊಂಡು, ಹಣ ಪಾವತಿಸಿರಲಿಲ್ಲ. ಐದು ತಿಂಗಳು ಕಳೆದರೂ ಬಾಡಿಗೆ ಹಣ ಪಾವತಿಸದೇ ಅಧಿಕಾರಿಗಳು ಸತಾಯಿಸಿದ್ದರು. ಇದರಿಂದಾಗಿ ಯಳಂದೂರು ತಹಶೀಲ್ದಾರ್ ಕಚೇರಿಗೆ ಮಹೇಶ್ ಅವರು ತಮ್ಮ ಮಕ್ಕಳ ಜೊತೆಗೆ ಬಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಮಹೇಶ್ ಅವರು ತಹಶೀಲ್ದಾರ್ ಗೀತಾ ಹುಡೆದ ಅವರ ವಾಹನದ ಕೆಳಗೆ ಮಲಗಿ, ಬಾಡಿಗೆ ಹಣ ಪಾವತಿ ಮಾಡಿಯೇ ಹೋಗಬೇಕು ಎಂದು ಪಟ್ಟು ಹಿಡಿದರು. ತಾಲೂಕು ಕಚೇರಿ ಸಿಬ್ಬಂದಿ ಎಷ್ಟೇ ಬೇಡಿಕೊಂಡರೂ ದಾರಿ ಬಿಡದ ಮಹೇಶ್ ಅವರು, ಕೆಲ ಹೊತ್ತು ಅಧಿಕಾರಿಗಳ ವಿರುದ್ಧ ಗುಡುಗಿದರು.

ಕಾರಿಗೆ ಪೆಟ್ರೋಲ್ ಹಾಕಿಸಲು ಸಾಲ ಪಡೆದಿದ್ದೆ. ಅವರು ಕೊಟ್ಟವರು ಈಗ ಹಣ ಮರಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಸರ್ಕಾರದಿಂದ ಬರಬೇಕಾದ ಬಾಡಿಗೆ ಹಣ ಬಂದಿಲ್ಲ. ಸುತ್ತಮುತ್ತಲಿನ ಗ್ರಾಮಗಳ ಬಾಡಿಗೆ ವಾಹನದಾರರಿಗೆ ಹಣ ಪಾವತಿಯಾಗಿದೆ. ನನ್ನನ್ನು ಸೇರಿ ಐವರ ಬಾಡಿಗೆ ಹಣವನ್ನು ಹಿಡಿದಿಡಲಾಗಿದೆ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ. ನಾವು ಚುನಾವಣೆ ದಿನ ಕೆಲಸ ಮಾಡಿಲ್ಲ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಮಹೇಶ್ ಆರೋಪಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/3_rRJBQIjoI

Share This Article
Leave a Comment

Leave a Reply

Your email address will not be published. Required fields are marked *