ನಾಪತ್ತೆಯಾಗಿದ್ದ ವ್ಯಕ್ತಿ 30 ವರ್ಷಗಳ ನಂತ್ರ ಗೂಗಲ್ ಮ್ಯಾಪ್ ಸಹಾಯದಿಂದ ವಾಪಸ್

Public TV
1 Min Read

ಚಿತ್ರದುರ್ಗ: ಮೂವತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ ಸಹಾಯದಿಂದ ತಮ್ಮ ಗ್ರಾಮಕ್ಕೆ ವಾಪಸ್ ಬರುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ವಿರುಪಾಕ್ಷಪ್ಪ ಗೂಗಲ್ ಮ್ಯಾಪ್ ಸಹಾಯದಿಂದ 3 ದಶಕದ ಬಳಿಕ ಚಿತ್ರದುರ್ಗ ತಾಲೂಕಿನ ಹಂಪನೂರು ಗ್ರಾಮಕ್ಕೆ ಮರಳಿ ಬಂದಿದ್ದಾರೆ. ವಿರುಪಾಕ್ಷಪ್ಪ 30 ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದರು. ಆದರೆ ಹೈದರಾಬಾದ್‍ನಲ್ಲಿ ಆಕಸ್ಮಿಕವಾಗಿ ಅಪಘಾತಕ್ಕೀಡಾಗಿದ್ದರು. ಆ ವೇಳೆ ಅವರ ಸ್ಮರಣಾ ಶಕ್ತಿ ದೋಷದಿಂದಾಗಿ ಹಳೆಯ ನೆನಪನ್ನು ಮರೆತಿದ್ದರು. ಬಳಿಕ ವಿರುಪಾಕ್ಷಪ್ಪನಿಗೆ ಅಪಘಾತ ಮಾಡಿದವರೇ ಆತನಿಗೆ ತಮ್ಮ ಮಗಳನ್ನು ಕೊಟ್ಟು ಹೈದರಾಬಾದ್‍ನಲ್ಲಿ ಮದುವೆ ಮಾಡಿದ್ದರು.

ಇತ್ತ ಆತ ಎಲ್ಲೋ ಸಾವನ್ನಪ್ಪಿದ್ದಾನೆಂದು ಎಲ್ಲರೂ ಭಾವಿಸಿದ್ದರು. ಆದರೆ 3 ದಶಕ ಬಳಿಕ ಸ್ವಗ್ರಾಮಕ್ಕೆ ಆತ ವಾಪಸ್ ಆಗಮಿಸಿ ಎಲ್ಲರಲ್ಲೂ ಅಚ್ಚರಿ ಹಾಗೂ ಸಂತಸ ಮೂಡಿಸಿದ್ದಾರೆ. ವಿರುಪಾಕ್ಷಪ್ಪ ಕಾರ್ಯ ನಿಮಿತ್ತ ಬೆಂಗಳೂರಿನ ಕೆಲ ವಿಳಾಸಗಳ ಮಾಹಿತಿ ಬಗ್ಗೆ ಗೂಗಲ್‍ನಲ್ಲಿ ಹುಡುಕಾಡಿದ್ದಾರೆ. ಆಗ ಚಿತ್ರದುರ್ಗ, ಚಳ್ಳಕೆರೆ, ಭರಮಸಾಗರ ಹಾಗೂ ಹೊಳಲ್ಕೆರೆ ಸೇರಿದಂತೆ ತಮ್ಮ ಸ್ವಗ್ರಾಮದ ಶ್ರೀ ರಂಗನಾಥಸ್ವಾಮಿ ದೇಗುಲದ ಮಾಹಿತಿಯನ್ನು ಕಂಡು ನೆನಪು ಮರುಕಳಿಸಿದೆ.

ಈ ವಿಚಾರವನ್ನು ತಮ್ಮ ಪತ್ನಿಯೊಂದಿಗೆ ಚರ್ಚಿಸಿದ ವಿರುಪಾಕ್ಷಪ್ಪ ಪತ್ನಿಯ ನೆರವಿನಿಂದ ಸ್ವಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ಕಳೆದು ಹೋದ ನೆನಪು ಮತ್ತೆ ವಾಪಸ್ ಬರುವಂತೆ ಗೂಗಲ್ ಮಾಡಿದ್ದು, ಅವರ ಸಹೋದರ ಹಾಗೂ ಗ್ರಾಮಸ್ಥರನ್ನು ಮತ್ತೆ ನೋಡುವ ಭಾಗ್ಯ ಗೂಗಲ್ ಕಲ್ಪಿಸಿದೆ. ಸದ್ಯ ಕಾರ್ಯ ನಿಮಿತ್ತ ವಾಪಸ್ ವಿಜಯವಾಡಕ್ಕೆ ತೆರಳಿರುವ ವಿರೂಪಾಕ್ಷಪ್ಪ, ಮುಂದಿನ ವಾರ ಮತ್ತೆ ಸ್ವಗ್ರಾಮವಾದ ಹಂಪನೂರಿಗೆ ಆಗಮಿಸುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *