ಧಾರವಾಡ ದುರಂತ: 4 ದಿನಗಳ ಬಳಿಕ ಬದುಕಿಬಂದ ಯುವಕ – ಸಾವಿನ ಸಂಖ್ಯೆ 15ಕ್ಕೆ ಏರಿಕೆ

Public TV
2 Min Read

ಧಾರವಾಡ: ಕಾಂಪ್ಲೆಕ್ಸ್ ಕುಸಿತ ದುರಂತದಲ್ಲಿ ಇಂದು ಬೆಳಗ್ಗೆ ಎನ್‍ಡಿಆರ್ ಎಫ್ ಸಿಬ್ಬಂದಿ ಯುವಕರೊಬ್ಬರನ್ನು ಮೂರು ದಿನಗಳ ಬಳಿಕ ಜೀವಂತವಾಗಿ ರಕ್ಷಣೆ ಮಾಡಿದ್ದಾರೆ.

ಸಂಗನಗೌಡ ರಾಮನಗೌಡ (24) ಅವರನ್ನು ರಕ್ಷಿಸಿದ್ದು, ಅವರು ಜೆಡಿಎಸ್ ಕಚೇರಿಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭಿಸಿದೆ. ರಾಮನಗೌಡ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕ ಉಳಿಗೇರಿ ನಿವಾಸಿಯಾಗಿದ್ದಾರೆ.

ಕಟ್ಟಡ ಕೆಳಗೆ ಊಟ ನೀರು ಇಲ್ಲದೆ ಸಿಲುಕಿದ್ದ ಯುವಕನ ರಕ್ಷಣೆ ಮಾಡಿದ ಬಳಿಕ ಸ್ಥಳದಿಂದ ನಡೆದುಕೊಂಡು ಹೋಗಿದ್ದಾರೆ. ಸದ್ಯ ಅವರಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಕಟ್ಟದ ಕೆಳಗೆ ಸಿಲುಕಿದ ದಿನದಿಂದ ನೀರು, ಅನ್ನ ಇಲ್ಲದೇ ಮಲಗಿದ್ದಲ್ಲೇ ಮಲಗಿದ್ದೆ. ಬದುಕಿ ಬರುತ್ತೇನೆ ಎಂದ ಆಸೆ ಇರಲಿಲ್ಲ. ಆದರೆ ಈಗ ಮರು ಜೀವ ಪಡೆದಿದ್ದೇನೆ. ನನ್ನ ಜೊತೆಗೆ ಇಬ್ಬರು ಇದ್ದರು, ಎರಡು ದಿನ ನನ್ನ ಜೊತೆಗೆ ಮಾತನಾಡುತ್ತಿದ್ದರು. ಆದರೆ ಮತ್ತೆ ಅವರ ಧ್ವನಿ ಕೇಳಿಸಲಿಲ್ಲ  ಎಂದು ಹೇಳಿದ್ದಾರೆ. ತಮ್ಮನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಎನ್‍ಡಿಆರ್ ಎಫ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಇದರೊಂದಿಗೆ ಮತ್ತೆ ಮೂವರು ಕಟ್ಟಡದ ಅವಶೇಷಗಳ ಅಡಿ ಜೀವಂತವಾಗಿರುವುದು ಖಚಿತವಾಗಿದ್ದು, ಎನ್‍ಡಿಆರ್ ಎಫ್ ಸಿಬ್ಬಂದಿ ಮೂವರ ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅವರನ್ನು ಸಂಗೀತಾ, ಸೋಮು ಹಾಗೂ ದಿಲೀಪ ಎಂದು ಗುರುತಿಸಲಾಗಿದ್ದು, ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಸಿಲುಕಿದ್ದಾರೆ. ಅವರ ರಕ್ಷಣೆಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.

ಕಟ್ಟಡದಡಿ ಸಿಲುಕಿರುವ ರಕ್ಷಣೆಗೆ ಹಲವು ಅಡೆ ತಡೆಗಳು ಎದುರಾಗುತ್ತಿದ್ದು, ಸಿಬ್ಬಂದಿಗೆ ಕಟ್ಟಡದ ಕಬ್ಬಿಣದ ಸರಳುಗಳು ಮುಂದೆ ಸಾಗಲು ಅಡ್ಡಿಯಾಗುತ್ತಿದೆ. ಪರಿಣಾಮ ಒಂದೊಂದೆ ಸರಳುಗಳನ್ನ ತೆಗೆದು ರಕ್ಷಣಾ ಕಾರ್ಯ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಕಬ್ಬಿಣದ ಸರಳು ತೆರವುಗೊಳಿಸಲು ಗ್ಯಾಸ್ ಕಟರ್ ಬಳಲಾಗುತ್ತಿದ್ದು, ಇದುವರೆಗೂ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಕಟ್ಟಡದಲ್ಲಿದ್ದ ಹೋಟೆಲ್‍ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ದ್ರಾಕ್ಷಾಯಿಣಿ ಮುತ್ತೂರು (45) ಮೃತ ಮಹಿಳೆಯಾಗಿದ್ದಾರೆ. ಪತಿ ಶಿವಲಿಂಗಪ್ಪ ಹೋಟೆಲ್ ನೀರು ಹೊರಗೆ ಹಾಕಲು ತೆರಳಿದ್ದ ವೇಳೆ ಕ್ಷಣಾರ್ಧದಲ್ಲಿ ಕಟ್ಟಡ ಉರುಳಿ ಬಿದ್ದಿತ್ತು.

ಇಂದು ಕಟ್ಟಡ ಕುಸಿತ ಸ್ಥಳಕ್ಕೆ ಎಲ್ಲಾ ಧರ್ಮ ಗುರುಗಳು ಭೇಟಿ ನೀಡಿದ್ದಾರೆ. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀ, ಮುಸ್ಲಿಮ್ ಧರ್ಮ ಗುರು ಜೈನುದ್ದಿನ ಹಾಗೂ ಕ್ರಿಶ್ಚಿಯನ್ ಧರ್ಮಗುರು ಪ್ರಶಾಂತ ಸಿಡೊಜಾ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *