ಬೆಂಗಳೂರಿನಲ್ಲಿ 40 ಸಾವಿರದ ಉದ್ಯೋಗಕ್ಕೆ ಗುಡ್‌ಬೈ – ಊರಿನಲ್ಲಿ ಅಡಿಕೆ ಕೊನೆಕಾರನ ಕೆಲಸಕ್ಕೆ ಜೈ

2 Min Read

ಚಿಕ್ಕಮಗಳೂರು: ಬೆಂಗಳೂರಿನಲ್ಲಿ ತಿಂಗಳಿಗೆ 40 ಸಾವಿರ ಸಂಬಳ ಬರುವ ಕೆಲಸ ಬಿಟ್ಟ ಯುವಕರೊಬ್ಬರು ಊರಿನಲ್ಲಿ  ಅಡಿಕೆ ಕೊಯ್ಯುತ್ತಿರುವ ಕೆಲಸ ಮಾಡಿ ಸುದ್ದಿಯಾಗಿದ್ದಾರೆ.

ಕಳಸ ತಾಲೂಕಿನ ಪವನ್ ಕೋವಿಡ್‌ ಲಾಕ್‌ಡೌನ್‌ಗೂ ಮೊದಲು ಬೆಂಗಳೂರಿನ (Bengaluru) ಖಾಸಗಿ ಕಂಪನಿಯಲ್ಲಿ ತಿಂಗಳಿಗೆ 40 ಸಾವಿರ ರೂ. ಸಂಬಳದ ಕೆಲಸ ಮಾಡುತ್ತಿದ್ದರು. ಆದರೆ ಲಾಕ್‌ಡೌನ್ ಬಳಿಕ ಊರಿಗೆ ಬಂದ ಅವರು ಮತ್ತೇ ಬೆಂಗಳೂರಿನತ್ತ ಮುಖ ಮಾಡಲೇ ಇಲ್ಲ. ಸ್ನೇಹಿತರ ಜೊತೆ ಕಳಸದಲ್ಲೇ ಅಡಿಕೆ ಮರ (Arecanut Tree) ಏರಿ ಅಡಿಕೆ ಕೊಯ್ಯುವ (ಕೊನೆಕಾರ) ಕೆಲಸ ಮಾಡುತ್ತಾ ಇಲ್ಲೇ ನೆಮ್ಮದಿ ಎಂದು ಭಾವಿಸಿದ್ದಾರೆ

ಕಳಸ ತಾಲೂಕಿನ ಹಿರೇಬೈಲ್ ಎಡೂರು ಗ್ರಾಮದ ಪವನ್ ಜೊತೆ ಮತ್ತಿಬ್ಬರು ಯುವಕರು ಒಟ್ಟು ಮೂವರು ಈಗ ಇದೇ ನೆಮ್ಮದಿ ಎಂದು ಅಡಿಕೆ ಕೊಯ್ಯುವ ಕೆಲಸದಲ್ಲೇ ನಿರತರಾಗಿದ್ದಾರೆ. ಇಂದು ಕೇವಲ ಕೆಲಸಗಾರರಾಗಿ ಉಳಿಯದೇ ತಮ್ಮ ಸಾಹಸ ಮತ್ತು ಕಾಯಕ ನಿಷ್ಠೆಯಿಂದ ಕಳಸ ತಾಲೂಕಿನ ʼಮೂರು ಮುತ್ತುಗಳುʼ ಎಂದೇ ಪ್ರಸಿದ್ಧರಾಗಿದ್ದಾರೆ.

ಪವನ್, ಪೂರ್ಣೇಶ್ ಹಾಗೂ ಅಶ್ವಥ್‌ ಅಡಿಕೆ ಮರವೇರುವ ಕಾಯಕದಲ್ಲಿ ನಿರತರಾಗಿದ್ದು, ಇವರ ಸಾಹಸ ಇಂದು ಇಡೀ ತಾಲೂಕಿನಾದ್ಯಂತ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಂದು ಪವನ್ ಮತ್ತು ತಂಡ ಹಿರೇಬೈಲ್, ಮರಸಣಿಗೆ, ಎಡೂರು, ಕೆಳಗೂರು ಹಾಗೂ ಬಾಳೆಹೊಳೆ ಭಾಗದ ಕೃಷಿಕರ ನೆಚ್ಚಿನ ಯುವಕರಾಗಿ ಗುರುತಿಸಿಕೊಂಡಿದ್ದಾರೆ. ​ ಇದನ್ನೂ ಓದಿ: ಕಬ್ಬಿನ ಹುಲ್ಲು ಸಾಗಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶ – ಧಗ ಧಗ ಹೊತ್ತಿ ಉರಿದ ಟ್ರ್ಯಾಕ್ಟರ್‌

ಸುಮಾರು 120-150 ಅಡಿ ಎತ್ತರದ ಅಡಿಕೆ ಮರಗಳಿಗೆ ಹತ್ತಿ ಅಡಿಕೆ ಕೊನೆ ತೆಗೆಯುವುದು, ಮದ್ದು ಸಿಂಪಡಿಸುವುದು, ಕಾಳು ಮೆಣಸು ಕೊಯ್ಯುವುದು ಹಾಗೂ ಮರಗಸಿ ಮಾಡುವ ಕಠಿಣ ಕೆಲಸಗಳನ್ನು ಇವರು ನಗುನಗುತ್ತಾ ಸಲೀಸಾಗಿ ನಿರ್ವಹಿಸುತ್ತಾರೆ.

ಗಾಳಿಯಲ್ಲಿ ತೂಗಾಡುತ್ತಾ ಮರದಿಂದ ಮರಕ್ಕೆ ಇವರು ಹಾರುವ ದೃಶ್ಯ ನೋಡುಗರ ಮೈ ನಡುಗಿಸುವಂತಿದೆ. ಮತ್ತೆ ಬೆಂಗಳೂರಿಗೆ ಹೋಗಲ್ವಾ ಎಂದು ಯಾರಾದರೂ ಕೇಳಿದರೆ ಪವನ್ ಆ ಟೆನ್ಷನ್, ಟ್ರಾಫಿಕ್, ವಾತಾವರಣಕ್ಕಿಂತ ಇದೇ ನೆಮ್ಮದಿ ಅಂತಿದ್ದಾರೆ.

ಅಲ್ಲಿ ಮಾಡುವ ಕೆಲಸವನ್ನ ಇಲ್ಲೇ ಮಾಡಿದರೆ ಅದಕ್ಕಿಂತ ಜಾಸ್ತಿ ದುಡಿಯಬಹುದು. ಆರೋಗ್ಯವೂ ಚೆನ್ನಾಗಿರುತ್ತೆ ಎಂದು ಹಳ್ಳಿಸೊಗಡಿನ ಬದುಕಿಗೆ ಫಿದಾ ಆಗಿದ್ದಾ‌ರೆ. ಬೆಂಗಳೂರಿಗಿಂತ ಇಲ್ಲೇ ರಾಜರಂತೆ ಇರಬಹುದು ಎನ್ನುವುದು ಪವನ್ ಅಂತರಾಳ.

Share This Article