ಹೆಣ್ಣು ಅಂತ 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಪಾಪಿ ತಂದೆ

Public TV
2 Min Read

ಗಾಂಧೀನಗರ: ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬರು ಮೀನು ನೋಡಲು 7 ವರ್ಷದ ಮಗಳನ್ನು ಕರೆದುಕೊಂಡು ಹೋಗಿ ಕಾಲುವೆಗೆ ತಳ್ಳಿರುವ ಘಟನೆ ನಡೆದಿದೆ.

ಭೂಮಿಕಾ ಮೃತ ದುರ್ದೈವಿ. ಖೇಡಾ ನಿವಾಸಿ ವಿಜಯ್‌ ಸೋಲಂಕಿ ತನ್ನ ಮಗಳನ್ನು ಹತ್ಯೆ ಮಾಡಿದ ತಂದೆ. ಪತಿ ವಿರುದ್ಧ ಅಂಜನಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ನನ್ನ ಮಗಳು ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ. ಪತಿ ಗುಜರಾತ್‌ನ ನರ್ಮದಾ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ತಪ್ಪಿತು ದೊಡ್ಡ ದುರಂತ – ಮತ್ತೆ ಟೇಕಾಫ್ ಆಗಿ ಇಂಡಿಗೋ ಸೇಫ್ ಲ್ಯಾಂಡಿಂಗ್

ಸೋಲಂಕಿ ದಂಪತಿ ತಮ್ಮ ಮಗಳ ಜೊತೆ ಸ್ಥಳೀಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮೂವರು ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ತವರು ಮನೆಗೆ ಹೋಗುವ ಬಯಕೆಯನ್ನು ಅಂಜನಾ ವ್ಯಕ್ತಪಡಿಸಿದರು. ಅದಕ್ಕೆ ಪತಿ ನಿರಾಕರಿಸಿದ. ‘ನನಗೆ ಗಂಡು ಮಗು ಬೇಕಿತ್ತು. ಆದರೆ, ನೀನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೀಯಾ’ ಎಂದು ಪತ್ನಿಯನ್ನು ನಿಂದಿಸಿದ್ದ.

ಕೆಲವು ನಿಮಿಷಗಳ ನಂತರ, ರಾತ್ರಿ 8 ಗಂಟೆ ಸುಮಾರಿಗೆ, ಆ ವ್ಯಕ್ತಿ ಕಪದ್ವಾಂಜ್‌ನ ವಾಘಾವತ್ ಸೇತುವೆಯ ಮೇಲೆ ಬೈಕ್ ನಿಲ್ಲಿಸಿ ತನ್ನ ಮಗಳನ್ನು ವೇಗವಾಗಿ ಹರಿಯುವ ನರ್ಮದಾ ಕಾಲುವೆಗೆ ತಳ್ಳಿದ್ದಾನೆ. ಈ ಘಟನೆಯನ್ನು ಯಾರಿಗಾದರೂ ತಿಳಿಸಿದರೆ ವಿಚ್ಛೇದನ ನೀಡುವುದಾಗಿ ಪತ್ನಿಗೆ ಹೆದರಿಸಿದ್ದ. ಇದರಿಂದ ಅಂಜನಾ ತುಂಬಾ ದುಃಖಿತಳಾಗಿದ್ದಳು. ಕೊನೆಗೆ ಆಕೆಯನ್ನು ತವರು ಮನೆಗೆ ಬಿಟ್ಟು ಬಂದಿದ್ದ. ಮಗಳನ್ನು ಕಳೆದುಕೊಂಡ ನೋವನ್ನು ತಾಳಲಾರದೇ ಪತ್ನಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸ್‌ನಲ್ಲೇ ಗಂಡು ಮಗು ಜನನ – ಬಟ್ಟೆ ಸುತ್ತಿ ಕಿಟಿಕಿಯಿಂದ ಆಚೆ ಎಸೆದ ಪಾಪಿ ತಾಯಿ

ಮೀನುಗಳನ್ನು ನೋಡಲು ಕಾಲುವೆಯ ಬಳಿ ನಿಂತಿದ್ದಾಗ ಮಗಳು ಜಾರಿಬಿದ್ದಳು ಎಂದು ವಿಜಯ್‌ ಕತೆ ಕಟ್ಟಿದ್ದ. ಪೊಲೀಸರು ಹುಡುಗಿಯ ಚಪ್ಪಲಿ ಮತ್ತು ಆಕೆಯ ಮೃತದೇಹವನ್ನು ಪತ್ತೆಮಾಡಿ ಹೊರತೆಗೆದರು. ಅಂತರಸುಬಾ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಬಾಲಕಿ ಸಾವಿನ ಬಗ್ಗೆ ಅನುಮಾನಗೊಂಡು ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದಾಗ, ಪತಿಯಿಂದಲೇ ಈ ಕೃತ್ಯ ನಡೆದಿದೆ ಎಂಬುದನ್ನು ಪತ್ನಿ ಒಪ್ಪಿಕೊಂಡಿದ್ದಾರೆ.

Share This Article