ನಿಧಿ ಆಸೆಗೆ ಮನೆ ಕಳೆದುಕೊಂಡು ಬೀದಿಪಾಲಾದ ವ್ಯಕ್ತಿ

Public TV
2 Min Read

ಮಡಿಕೇರಿ: ಹೊಸ ಮನೆ ಕಟ್ಟಬೇಕು ಎಂದು ಹಳೆ ಮನೆಯನ್ನು ಬೀಳಿಸುವವರನ್ನ ನೋಡಿದ್ದೇವೆ. ಕಟ್ಟಿದ ಮನೆ ಸರಿಯಿಲ್ಲ ಅಂತ ಸರಿಪಡಿಸೋದನ್ನ ನೋಡಿದ್ದೇವೆ. ಆದರೆ ವಿರಾಜಪೇಟೆ ತಾಲೂಕಿನ ಚೇಲಾವರ ಗ್ರಾಮದಲ್ಲಿ ನಿಧಿ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು ಮನೆ ಕಳೆದುಕೊಂಡಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಚೇಲಾವರ ಗ್ರಾಮದಲ್ಲಿ 2 ವರ್ಷದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭೂಮಿಯೊಳಗೆ ನಿಧಿ ಇದೆ ಅಂತ ಇಲ್ಲದ ಸಂಪತ್ತಿನ ಆಸೆಗೆ ಬಿದ್ದು, ಯಾರದ್ದೋ ಮಾತು ನಂಬಿ ಚೇಲಾವರ ಗ್ರಾಮದ ನಿವಾಸಿ ಗಣಪತಿ ಅವರು ತಮ್ಮ ಮನೆಯೊಳಗೆ ಹಾಗೂ ಮನೆಯ ಸುತ್ತ ಅಗೆದು ಇದ್ದ ಮನೆಯನ್ನು ಕೂಡ ಬೀಳಿಸಿಕೊಂಡು ಬೀದಿಪಾಲಾಗಿದ್ದಾರೆ.

ಚೇಲಾವರ ಗ್ರಾಮಕ್ಕೆ ಹೊಂದಿಕೊಂಡಂತೆ ಅತೀ ದೊಡ್ಡದಾದ ಕಬ್ಬೆ ಬೆಟ್ಟವಿದೆ. ಈ ಬೆಟ್ಟವನ್ನು ದಾಟಿದರೆ ಸಾಕು ಕೇರಳ ರಾಜ್ಯ ಸಿಗುತ್ತದೆ. ಆದರೆ ಈ ಬೆಟ್ಟದಲ್ಲಿ ಅಪಾರ ನಿಧಿ ಇದೆ ಎನ್ನುವ ನಂಬಿಕೆ ಇಲ್ಲಿಯ ಜನರಲ್ಲಿ ಇದೆ. ಈ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ದುಷ್ಕರ್ಮಿಗಳು ಗಣಪತಿಯವರ ತಲೆಕೆಡಿಸಿ ಅವರ ಮನೆಯೊಳಗೆ ಮತ್ತು ಮನೆ ಸುತ್ತ ಅಗೆಸಿದ್ದಾರೆ. ಹೀಗೆ ಅಗೆಸಿದ ಗುಂಡಿಯಲ್ಲೆಲ್ಲಾ ಮಳೆಗಾಲದಲ್ಲಿ ನೀರು ನಿಂತು ಇಡೀ ಮನೆ ಬಿದ್ದು ನೆಲಸಮವಾಗಿದೆ.

ನಿಧಿಯನ್ನು ತೆಗೆಯಲು ಕೇರಳದಿಂದ ಜೊತೆಗೆ ಅರಬ್ ದೇಶದಿಂದಲೂ ಇಬ್ಬರು ಮಂತ್ರವಾದಿಗಳು ಗಣಪತಿ ಅವರ ಮನೆಗೆ ಬಂದಿದ್ದರು. ಅದಕ್ಕೆಲ್ಲಾ ಮುಖ್ಯವಾಗಿ ಕುಮ್ಮಕ್ಕು ನೀಡಿದವನು ಇದೇ ಊರಿನ ವ್ಯಕ್ತಿ. ಕಳೆದುಕೊಂಡಿರುವ ಗಣಪತಿ ಇವರ ಮಾತನ್ನು ನಂಬಿ ನಾನು ಹಾಳಾಗಿ ಹೋಗಿದ್ದೇನೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಆಸರೆಗಿದ್ದ ಮನೆಯನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಗಣಪತಿ, ಚೇಲಾವರದಿಂದ ಮೂರು ಕಿಲೋಮೀಟರ್ ದೂರದ ಕಬ್ಬೆಬೆಟ್ಟದ ತಪ್ಪಲಿರುವ ಐಟಿಡಿಪಿ ಇಲಾಖೆ ನಿರ್ಮಿಸಿರುವ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದಾರೆ.

ಆದರೆ ನರಿಯಂದಡ ಗ್ರಾಮ ಪಂಚಾಯ್ತಿಯವರು ಈ ಸಮುದಾಯ ಭವನವನ್ನು ಖಾಲಿ ಮಾಡುವಂತೆ ಗಣಪತಿ ಅವರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಗ್ಯಾಂಗ್ರಿನ್ ಆಗಿ ಜೀವನ್ಮರಣದಲ್ಲಿ ಒದ್ದಾಡುತ್ತಿರುವ ಗಣಪತಿ ಅವರು ಇರಲು ಮನೆಯೂ ಇಲ್ಲದೆ, ದುಡಿಮೆಯೂ ಇಲ್ಲದೆ ಕನಿಷ್ಟ ಒಂದೊತ್ತಿನ ಊಟಕ್ಕೂ ಪರದಾಡುವ ಹೀನಾಯ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ನಿಧಿ ಆಸೆಗೆ ಗುಂಡಿ ತೆಗೆಯದಂತೆ ಎಷ್ಟೇ ಹೇಳಿದರು ಮಂತ್ರವಾದಿಗಳು ನನ್ನ ಮಾತನ್ನು ಕೇಳಲಿಲ್ಲ. ಮನೆಯಲ್ಲಿ ಎಂಟು ಅಡಿಯಷ್ಟು ಆಳದ ಗುಂಡಿ ತೆಗೆದಿದ್ದರು. ಹೀಗೆ ತೆಗೆದ ಗುಂಡಿಯಲ್ಲಿ ನೀರು ಸಿಕ್ಕಿತೇ ವಿನಃ ಯಾವುದೇ ನಿಧಿ ಸಿಕ್ಕಿಲ್ಲ. ಕೊನೆಗೆ ವಿಷಯ ಪೊಲೀಸರ ಕಿವಿಗೆ ಬಿದ್ದು ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಮಂತ್ರವಾದಿಗಳು ಕಾಲ್ಕಿತ್ತರು ಎಂದು ಗಣಪತಿ ತಿಳಿಸಿದ್ದಾರೆ. ಈ ಘಟನೆಗೂ ಒಂದು ವರ್ಷ ಮೊದಲು ಇದೇ ಗ್ರಾಮದಲ್ಲಿ ನಿಧಿ ಆಸೆಗಾಗಿ ವ್ಯಕ್ತಿಯೊಬ್ಬರನ್ನು ಕಬ್ಬೆಬೆಟ್ಟದಲ್ಲಿ ಬಲಿಕೊಟ್ಟಿದ್ದನ್ನು ಜನ ಈಗಲೂ ನೆನಪಿಸಿಕೊಳ್ಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *