ವ್ಯಕ್ತಿಯ ವಿಚಿತ್ರ ದೂರಿಗೆ ತಬ್ಬಿಬ್ಬಾದ ಪೊಲೀಸ್ ಅಧಿಕಾರಿ..!

Public TV
1 Min Read

ನಾಗಪುರ: ಹಣ ಕಳುವಾಗಿದೆ, ವಾಹನ ಹಾಗೂ ಚಿನ್ನಾಭರಣ ಕದ್ದಿದ್ದಾರೆ ಅಂತ ಜನರು ಪೊಲೀಸ್ ಮೋರೆ ಹೋಗ್ತಾರೆ. ಆದ್ರೆ ಮಹಾರಾಷ್ಟ್ರದಲ್ಲಿ ಯುವಕನೊಬ್ಬ ತನ್ನ ಹೃದಯ ಕಳ್ಳತನವಾಗಿದೆ ಹುಡುಕಿಕೊಡಿ ಅಂತ ಪೊಲೀಸರಿಗೆ ದೂರು ನೀಡಿರುವ ವಿಚಿತ್ರ ಘಟನೆ ನಡೆದಿದೆ.

ಹೌದು, ಮಹಾರಾಷ್ಟ್ರದ ನಾಗಪುರ ಪೊಲೀಸ್ ಠಾಣೆಗೆ ಇತ್ತೀಚೆಗೆ ಯುವಕನೊಬ್ಬ ತನ್ನ ಹೃದಯವನ್ನು ಹುಡುಗಿಯೊಬ್ಬಳು ಕದ್ದಿದ್ದಾಳೆ. ಅದನ್ನ ಹುಡುಕಿಕೊಡಿ ಅಂತ ದೂರು ನೀಡಿದ್ದಾನೆ. ಪ್ರೇಮಿಗಳು ತಮ್ಮ ಹೃದಯವು ಪ್ರೀತಿಯ ಬಲೆಗೆ ಸಿಕ್ಕಿ ಕಳೆದೋಗಿದೆ ಅಂತ ಡೈಲಾಗ್ ಹೇಳ್ತಿರ್ತಾರೆ. ಆದ್ರೆ ಯುವಕನೊಬ್ಬ ಅದನ್ನೇ ಗಂಭೀರವಾಗಿ ಪರಿಗಣಿಸಿ ನನ್ನ ಹೃದಯ ಹುಡುಗಿಯೊಬ್ಬಳು ಕದ್ದಿದ್ದಾಳೆ. ಅವಳನ್ನು ಹುಡುಕಿ ಕೊಡುವ ಮೂಲಕ ತನ್ನ ಹೃದಯ ವಾಪಸ್ ತನಗೆ ಕೊಡಿಸಿ ಅಂತ ಪೊಲೀಸರಿಗೆ ದೂರು ನೀಡಿದ್ದಾನೆ.

ಇದೆಂಥಾ ದೂರಪ್ಪಾ ಅಂತ ಪೊಲೀಸರು ಕೊಂಚ ಕಾಲ ಕಂಗಲಾಗಿದ್ದಂತೂ ಸತ್ಯ. ಈ ವಿಚಿತ್ರ ಪ್ರಕರಣವನ್ನು ಹೇಗೆ ಪರಿಹರಿಸೋದು ಎಂದು ತಿಳಿಯದೆ ಹಿರಿಯ ಅಧಿಕಾರಿಗಳ ಸಲಹೆ ಪಡೆದಿದ್ದೆವು ಅಂತ ನಾಗಪುರ ಪೊಲೀಸರು ತಿಳಿಸಿದ್ದಾರೆ.

ಬಳಿಕ ಉನ್ನತ ಅಧಿಕಾರಿ ಹತ್ತಿರ ಯುವಕನನ್ನು ಕಳುಹಿಸಿ ಮಾತನಾಡಿಸಿದ್ದೆವು. ಆಗ ಅಧಿಕಾರಿ ಭಾರತದ ಕಾನೂನಿನಲ್ಲಿ ಈ ರೀತಿಯ ದೂರುಗಳಿಗೆ ಯಾವುದೇ ಸೆಕ್ಷನ್ ಇಲ್ಲ. ಆದ್ದರಿಂದ ನಿಮ್ಮ ದೂರನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿ ಹೇಳಿದ್ದಾರೆ. ಕೊನೆಗೆ ಈ ದೂರಿಗೆ ಯಾವುದೇ ಪರಿಹಾರವಿಲ್ಲ ಎಂದು ತಿಳಿದ ನಂತರ ಆತ ವಾಪಸ್ ಹೋದನು ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ನಾಗಪುರ ಪೊಲೀಸ್ ಕಮಿಷನರ್ ಭೂಷಣ್ ಕುಮಾರ್ ಉಪಾಧ್ಯಾಯ ಈ ವಿಚಿತ್ರ ಘಟನೆಯನ್ನು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಪೊಲೀಸರು ಕಳವು ಪ್ರಕರಣಗಳನ್ನು ಭೇದಿಸಿ, ಸುಮಾರು 82 ಲಕ್ಷ ಮೌಲ್ಯದ ಕಳ್ಳತನವಾಗಿದ್ದ ವಸ್ತುಗಳನ್ನ ಮಾಲೀಕರಿಗೆ ಹಿಂದಿರುಗಿಸಿದರು. ಆಗ ಮಾಧ್ಯಮಗಳ ಜೊತೆ ಮಾತನಾಡಿದ ಅಧಿಕಾರಿ, ನಾವು ಕಳೆದುಹೋದ ವಸ್ತುಗಳನ್ನ ಹುಡುಕಿಕೊಡಬಹುದು. ಆದ್ರೆ ಕೆಲವೊಮ್ಮೆ ಇಂಥಹ ವಿಚಿತ್ರ ದೂರುಗಳು ಬಂದ್ರೆ ನಾವೇನೂ ಮಾಡೋಕೆ ಆಗಲ್ಲ ಎಂದು ಹಾಸ್ಯ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *