ಬೆಂಗಳೂರು: ಮಹಿಳೆಯನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದ ಆರೋಪಿಯನ್ನು ಕೆ.ಜಿ ಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡೇವಿಡ್ ಕುಮಾರ್ ಬಂಧಿತ ಆರೋಪಿ. ಈತ ತಾನು ಪ್ರೀತಿಸುತ್ತಿದ್ದ ಸುನೀತಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದನು. ಮೃತ ಪೋಷಕರು ಮಗಳು ನಾಪತ್ತೆಯಾಗಿದ್ದಳು ಎಂದು ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಈ ಕೇಸನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದು, ಎರಡು ತಿಂಗಳ ನಂತರ ಈ ಪ್ರಕರಣ ಭೇದಿಸಿದ್ದಾರೆ.
ಏನಿದು ಪ್ರಕರಣ?
ಆರೋಪಿ ಮತ್ತು ಮೃತ ಸುನೀತಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಡೇವಿಡ್ ಕುಮಾರ್ ಬೇರೆ ಮದುವೆ ಆಗಿದ್ದನು. ಇತ್ತ ಇವರಿಬ್ಬರು ಪ್ರೀತಿಯ ವಿಚಾರ ಸುನೀತಾ ಮನೆಯವರಿಗೂ ತಿಳಿದಿತ್ತು. ಸುನೀತಾಳಿಗೆ 7 ತಿಂಗಳ ಹಿಂದೆ ಮಗು ಜನಿಸಿತ್ತು. ಹೀಗಾಗಿ ಕೊಲೆಯಾದ ಸುನೀತಾ ನನಗೆ ಜನಿಸಿರುವ ಮಗುವಿಗೆ ನೀನೇ ತಂದೆ, ಬೇರೆ ಮನೆ ಮಾಡಿ ನಮ್ಮಿಬ್ಬರನ್ನ ಬೇರೆ ಕಡೆ ಇರಿಸುವಂತೆ ಆರೋಪಿಗೆ ಪೀಡಿಸುತ್ತಿರುತ್ತಾಳೆ. ಬೇರೆ ಮನೆ ಮಾಡಿ ಇರಿಸದೇ ಹೊದರೆ ನಿಮ್ಮ ಮನೆ ಮುಂದೆ ಗಲಾಟೆ ಮಾಡುವುದಾಗಿ ಬೇದರಿಕೆ ಕೂಡ ಹಾಕಿದ್ದಳು.
ಸುನೀತಾಳ ನಡೆಯಿಂದ ಕುಪಿತಗೊಂಡ ಡೇವಿಡ್ ಕುಮಾರ್, ಸಕಲೇಶಪುರ ಬಳಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಸಕಲೇಶಪುರ ಘಾಟ್ ನಲ್ಲಿ ಎಸೆದು ಸುನೀತಾಳ ಬಳಿ ಇದ್ದ ಮಗುವನ್ನು ಆಕೆಯ ಪೋಷಕರಿಗೆ ತಲುಪಿಸಿದ್ದನು.
ಈ ಘಟನೆ ಸಂಬಂಧ ಸುನೀತಾ ಪೋಷಕರು ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದ ಕೆ.ಜಿ.ಹಳ್ಳಿ ಪೊಲೀಸರು ಸಿಸಿಬಿಗೆ ಕೇಸ್ ವರ್ಗಾವಣೆ ಮಾಡಿದ್ದರು. ಕಳೆದೆರಡು ತಿಂಗಳಿಂದ ಕಾರ್ಯಾಚರಣೆಗಿಳಿದಿದ್ದ ಸಿಸಿಬಿ ಪೊಲೀಸರು ಎರಡು ತಿಂಗಳ ಬಳಿ ಪ್ರಕರಣ ಭೇದಿಸಿದ್ದಾರೆ.