ಮಗನ ಬೇಡಿಕೆಗಳನ್ನು ಈಡೇರಿಸಲಾಗದೇ ಕೊಂದೇ ಬಿಟ್ಟ!

Public TV
1 Min Read

ನವದೆಹಲಿ: ಮಗನ ಬೇಡಿಕೆಗಳನ್ನು ಈಡೇರಿಸಲು ಆಗದ್ದಕ್ಕೆ ತಂದೆಯೇ ತನ್ನ ಪುತ್ರನನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.

ರೋಹಿಣಿಯ ನಿವಾಸಿ ವಿನೋದ್(46) ತನ್ನ 6 ವರ್ಷದ ಮಗನನ್ನು ಕೊಲೆಗೈದಿದ್ದಾನೆ. ಹಾಲಿನ ಉತ್ಪನ್ನಗಳನ್ನು ಮಾರುವ ಸೇಲ್ಸ್‍ಮ್ಯಾನ್ ಆಗಿ ವಿನೋದ್ ಕೆಲಸ ಮಾಡುತ್ತಿದ್ದನು. ಆದ್ರೆ ಕೆಲ ದಿನಗಳ ಹಿಂದೆ ಅವನು ಕೆಲಸ ಮಾಡುತ್ತಿದ್ದ ಅಂಗಡಿ ಮುಚ್ಚಿದ್ದರಿಂದ ವಿನೋದ್ ಕೆಲಸ ಕಳೆದುಕೊಂಡಿದ್ದನು. ಕೈಯಲ್ಲಿ ಕೆಲಸವಿಲ್ಲದೆ ಹಣವಿಲ್ಲದೆ ವಿನೋದ್ ಜೀವನ ಸಾಗಿಸಲು ಬಹಳ ಕಷ್ಟ ಪಡುತ್ತಿದ್ದನು. ಈ ವೇಳೆ ತನ್ನ ಮಗನನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ. ಆತನ ಆಸೆ, ಬೇಡಿಕೆಗಳನ್ನು ಪೂರೈಸಲು ಆಗುತ್ತಿಲ್ಲ ಎಂದು ಮನನೊಂದು ಅಸಹಾಯಕತೆಯಿಂದ ಸ್ವಂತ ಮಗನನ್ನೇ ವಿನೋದ್ ಶನಿವಾರದಂದು ಮನೆಯಲ್ಲಿ ಕೊಲೆ ಮಾಡಿದ್ದಾನೆ.

ಕಳೆದ ಎರಡು ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆಯಿಂದ ವಿನೋದ್ ಪತ್ನಿ ಸಾವನ್ನಪ್ಪಿದ್ದರು. ಆಗಿನಿಂದ ವಿನೋದ್ ಹಾಗೂ ಆತನ ಮಗ ಇಬ್ಬರೇ ರೋಹಿಣಿ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಆದರೆ ಶನಿವಾರ ಬೆಳಗ್ಗೆ ವಿನೋದ್ ಮಗನನ್ನು ಕೊಲೆ ಮಾಡಿ ಬಳಿಕ ಈ ವಿಷಯವನ್ನು ಆತ ಬಾಡಿಗೆಗೆ ಇದ್ದ ಮನೆಯ ಮಾಲೀಕರ ಬಳಿ ಬಂದು ಹೇಳಿದ್ದಾನೆ. ನಂತರ ಮತ್ತೆ ತನ್ನ ಮನೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಈ ಬಗ್ಗೆ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ತಿಳಿಸಿದಾಗ, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ತದನಂತರ ವಿಚಾರಣೆ ವೇಳೆ, ಮಗನನ್ನು ಸಾಕಲು ನನ್ನ ಬಳಿ ಹಣವಿರಲಿಲ್ಲ. ಆತನ ಆಸೆ, ಬೇಡಿಕೆಗಳನ್ನು ಪೂರೈಸಲು ನನ್ನ ಕೈಯಿಂದ ಆಗುತ್ತಿರಲಿಲ್ಲ. ಆದರಿಂದ ಮಗನನ್ನು ಕೊಲೆ ಮಾಡಿಬಿಟ್ಟೆ ಎಂದು ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *