ಪ್ರೇಯಸಿಗಾಗಿ ಕರೆಂಟ್ ಶಾಕ್ ಕೊಟ್ಟು ಬೆಂಗ್ಳೂರು ಬ್ಯಾಂಕ್ ಮ್ಯಾನೇಜರ್ ಕೊಲೆ

Public TV
2 Min Read

ರಾಮನಗರ: ಕೋಟಕ್ ಮಹಿಂದ್ರಾ ಬ್ಯಾಂಕ್ ನ ಡೆಪ್ಯೂಟಿ ಮ್ಯಾನೇಜರ್ ಅನಿಲ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕಗ್ಗಲೀಪುರ ಪೊಲೀಸರು ಯಶಸ್ವಿಯಾಗಿದ್ದು, ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

ಕನಕಪುರ ತಾಲೂಕಿನ ಕಚುವನಹಳ್ಳಿ ಗ್ರಾಮದ ನಿವಾಸಿಯಾದ ಮಾರ್ಕೆಟಿಂಗ್ ಮ್ಯಾನೇಜರ್ ಶಿವಬಸವೇಗೌಡ ಬಂಧಿತ ಕೊಲೆಗಾರ. ಇದೇ ಡಿಸೆಂಬರ್ 3 ರಂದು ಡೆಪ್ಯುಟಿ ಮ್ಯಾನೇಜರ್ ಅನಿಲ್ ನಾಪತ್ತೆ ಪ್ರಕರಣ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆ ದಿನದಂದೇ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಿ ಗ್ರಾಮದ ಸ್ಮಶಾನದಲ್ಲಿ ಅನಿಲ್ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕಗ್ಗಲೀಪುರ ಪೊಲೀಸರು ಇದೀಗ ಕೊಲೆಗಾರನನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಅನಿಲ್ ಕುಮಾರ್ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದು, ಅವರ ಮೃತದೇಹ ಡಿಸೆಂಬರ್ 4ನೇ ರಂದು ಕಗ್ಗಲೀಪುರ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದ್ದರು. ಈ ವೇಳೆ ರಿಯಲ್ ಎಸ್ಟೇಟ್ ಕಂಪೆನಿಯೊಂದರಲ್ಲಿ ಮಾರುಕಟ್ಟೆ ಪ್ರತಿನಿಧಿಯಾಗಿರುವ ಶಿವಬಸವೇಗೌಡನ ಬಗ್ಗೆ ಅನುಮಾನ ಬಂದಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದು ಒಪ್ಪಿಕೊಂಡಿದ್ದ.

ಕೊಲೆ ಎಸಗಿದ್ದು ಯಾಕೆ?
ಪ್ರೀತಿಸಿದ ಯುವತಿ ಮೇಲಿನ ಮೋಹಕ್ಕೆ ಶಿವಬಸವೇಗೌಡ ಅನಿಲ್ ನನ್ನು ಕೊಲೆ ಮಾಡಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಬ್ಯಾಂಕ್ ಮ್ಯಾನೇಜರ್ ಅನಿಲ್ ಗೆ ಶ್ವೇತಾ ಎಂಬಾಕೆ ಜೊತೆ ವಿವಾಹ ನಿಶ್ಚಯವಾಗಿತ್ತು. ತಾನು ಪ್ರೀತಿಸುತ್ತಿದ್ದ ಶ್ವೇತಾ ಬೇರೊಬ್ಬನ ಜೊತೆ ಮದುವೆಯಾಗುತ್ತಿರುವ ವಿಚಾರ ತಿಳಿದು ಮದುವೆ ತಪ್ಪಿಸಲು ದಾರಿ ಹುಡುಕಿದ್ದ. ಅನಿಲ್ ಜೊತೆ ಸ್ನೇಹ ಬೆಳೆಸಿಕೊಂಡು ಡಿಸೆಂಬರ್ 3 ರಂದು ಫೋನ್ ಮಾಡಿ ಉತ್ತರಿ ಗ್ರಾಮದ ಬಳಿ ಕರೆಸಿಕೊಂಡಿದ್ದ. ಬಳಿಕ 440 ಕೆವಿ ಸಾಮರ್ಥ್ಯದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಕರೆದೊಯ್ದು ವಿದ್ಯುತ್ ತಂತಿಯನ್ನು ಅನಿಲ್ ನ ದೇಹಕ್ಕೆ ಹಿಡಿದು ಕೊಲೆ ಮಾಡಿ ಪರಾರಿಯಾಗಿದ್ದ.

ಸ್ನೇಹ ಸಂಪಾದಿಸಿದ್ದು ಹೇಗೆ: ಶ್ವೇತಾ ತನ್ನ ಮದುವೆ ಬಗ್ಗೆ ಎಲ್ಲರ ಹತ್ತಿರ ಹೇಳಿಕೊಂಡಿದ್ದರು. ಈ ವೇಳೆ ಶುಭಾಶಯ ಕೋರುವುದಾಗಿ ಹೇಳಿ ಆರೋಪಿ ಶಿವಬಸವೇಗೌಡ ಶ್ವೇತಾ ಅವರಿಂದ ಅನಿಲ್ ನಂಬರ್ ಪಡೆದುಕೊಂಡು ಹೊಸ ಸಿಮ್ ಖರೀದಿ ಮಾಡಿದ್ದ. ನಂತರ ಅನಿಲ್ ಅವರಿಗೆ ಮೇಲಿಂದ ಮೇಲೆ ಕರೆ ಮಾಡಿ ಅವರ ಸ್ನೇಹ ಸಂಪಾದಿಸಿದ್ದ.

ಅನಿಲ್ ಡಿ.4 ರಂದು ಕಗ್ಗಲೀಪುರಕ್ಕೆ ಹೋಗಿದ್ದ ಮಾಹಿತಿ ಶಿವಬಸವೇಗೌಡನಿಗೆ ತಿಳಿದಿತ್ತು. ಆಗ ಶಿವಬಸವೇಗೌಡ ಅನಿಲ್‍ಗೆ ಕರೆ ಮಾಡಿ ರಾತ್ರಿ ಊಟಕ್ಕೆ ಆಹ್ವಾನ ನೀಡಿದ್ದ. ಅದಕ್ಕೆ ಅನಿಲ್ ಕೂಡ ಒಪ್ಪಿಕೊಂಡಿದ್ದರು. ಬಳಿಕ ಅವರಿಬ್ಬರೂ ನಗರದ ಹೊರವಲಯದ ರೆಸ್ಟೋರೆಂಟ್‍ ನಲ್ಲಿ ಊಟ ಮಾಡಿ ಬೈಕ್ ನಲ್ಲಿ ನಗರಕ್ಕೆ ವಾಪಸ್ ಹೊರಟಿದ್ದಾರೆ. ಮಧ್ಯದಲ್ಲಿ ಅನಿಲ್ ಅವರು ಮೂತ್ರ ವಿಸರ್ಜನೆ ಮಾಡಲು ನಿಲ್ಲಿಸಿದಾಗ ತನ್ನ ಬಳಿ ಇದ್ದ ವಯರ್ ಅನ್ನು ಅನಿಲ್ ಅವರ ದೇಹಕ್ಕೆ ತಾಗಿಸಿ, ಅದನ್ನು ಅಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ಗೆ ಸಂಪರ್ಕಿಸಿದ್ದ. ವಿದ್ಯುತ್ ಶಾಕ್ ಹೊಡೆದು ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಹಲವು ಪ್ರಯತ್ನ ನಡೆಸಿದ್ದ: ಟ್ರಾನ್ಸ್ ಫಾರ್ಮರ್ ಮೂಲಕ ವಿದ್ಯುತ್ ಹರಿಸಿ ಕೊಲೆ ಮಾಡುವುದಕ್ಕೆ ಆರೋಪಿ ಶಿವಬಸವೇಗೌಡ ಹಲವು ಬಾರಿ ಅಭ್ಯಾಸ ಮಾಡಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *