ಪ್ರೇಯಸಿ ಜೊತೆ ಸೇರಿ ಪತ್ನಿಯನ್ನೇ ಕೊಂದ!

Public TV
1 Min Read

– ಸಿಸಿಟಿವಿಯಿಂದ ಪ್ರಕರಣ ಬೆಳಕಿಗೆ

ನವದೆಹಲಿ: ತನ್ನ ಬಾಲ್ಯದ ಗೆಳತಿಯನ್ನು ಮದುವೆಯಾಗಲು ಪತಿಯೊಬ್ಬ ತನ್ನ ಪ್ರೇಯಸಿಯ ಸಹಾಯದಿಂದ ಪತ್ನಿಗೆ ವಿಷ ಕುಡಿಸಿ ಕೊಲೆ ಮಾಡಿದ ಘಟನೆ ನವದೆಹಲಿ ನಡೆದಿದೆ.

26 ವರ್ಷದ ಪೂಜಾ ತನ್ನ ಪತಿ 32 ವರ್ಷದ ರಾಹುಲ್ ಕುಮಾರ್ ಮಿಶ್ರಾನಿಂದಲೇ ಕೊಲೆಗೀಡಾಗಿದ್ದಾಳೆ. ರಾಹುಲ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಪೂಜಾ ಎಂಎನ್‍ಸಿಯಲ್ಲಿ ಕೆಲಸ ಮಾಡುತ್ತಿದ್ದಳು.

ರಾಹುಲ್ ತನ್ನ ಪ್ರೇಯಸಿ ಪದ್ಮಾ (33) ಮೂಲಕ ತನ್ನ ಪತ್ನಿಗೆ ವಿಷ ಆಹಾರ ನೀಡಿ ಕೊಲೆ ಮಾಡಿ ಬಳಿಕ ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಆದರೆ ಸಾಕ್ಷಿಗಳ ಮುಂದೆ ಆತನ ಪ್ಲಾನ್ ಕೆಲಸ ಮಾಡಲಿಲ್ಲ.

ಮಾರ್ಚ್ 16ರಂದು ಫೋರ್ಟಿಸ್ ಆಸ್ಪತ್ರೆ ಸಿಬ್ಬಂದಿ, ಮಹಿಳೆ ಮೃತಪಟ್ಟಿರುವ ಬಗ್ಗೆ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ವೇಳೆ ಪೊಲೀಸರು ಬಂದು ತನಿಖೆ ನಡೆಸಿದಾಗ ಪತಿ ರಾಹುಲನೇ ಪೂಜಾಳನ್ನು ಆಸ್ಪತ್ರೆಗೆ ದಾಖಲಿಸಿರುವ ವಿಚಾರ ಬೆಳಕಿಗೆ ಬಂದಿದೆ.

ಈ ಪ್ರಕರಣದ ಮಾಹಿತಿಯನ್ನು ಪೊಲೀಸರು ಎಸ್‍ಡಿಎಂ(ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್)ಗೆ ನೀಡಿದ್ದರು. ಬಳಿಕ ಪೊಲೀಸರು ಪೂಜಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಏಪ್ರಿಲ್ 27ರಂದು ವರದಿಯಲ್ಲಿ ಇದು ಕೊಲೆ ಎಂಬ ವಿಚಾರ ಸಾಬೀತಾಯಿತು. ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು.

ಪೊಲೀಸರಿಗೆ ಪತಿ ರಾಹುಲ್ ಹಾಗೂ ಆತನ ಪ್ರೇಯಸಿ ಪದ್ಮಾ ಮೇಲೆ ಅನುಮಾನ ಬಂತು. ಅಲ್ಲದೆ ಪೂಜಾ ಸಾವನ್ನಪ್ಪುವ ಮೊದಲು ಪದ್ಮಾ ಆಕೆಯನ್ನು ಭೇಟಿ ಮಾಡಲು ಬಂದಿದ್ದಳು ಎಂಬುದು ಸಿಸಿಟಿವಿ ದೃಶ್ಯದ ಮೂಲಕ ತಿಳಿಯಿತು. ಬಳಿಕ ಪೊಲೀಸರು ರಾಹುಲ್ ಹಾಗೂ ಪದ್ಮಾಳನ್ನು ಕರೆಸಿ ವಿಚಾರಣೆ ನಡೆಸಿದ್ದರು. ಮೊದಲು ಇಬ್ಬರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದರು. ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದರು. ಈ ವೇಳೆ ಇಬ್ಬರು ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸದ್ಯ ಪೊಲೀಸರು ರಾಹುಲ್ ಹಾಗು ಆತನ ಪ್ರೇಯಸಿ ಪದ್ಮಾಳನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *