ಬೀಜಿಂಗ್: ಯುವಕನೊಬ್ಬ ತನ್ನ ಆಸೆ ಪೂರೈಸಿಕೊಳ್ಳಲು ಲಕ್ಷಾಂತರ ರೂ. ಹಣವನ್ನು ಟೆರೇಸ್ ಮೇಲಿಂದ ಎಸೆದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕ ಜೈಲು ಪಾಲಾಗಿದ್ದಾನೆ.
ಜಗತ್ತಿನಲ್ಲಿ ದುಡ್ಡು ಸಂಪಾದಿಸಲು ಜನರು ಎಷ್ಟೆಲ್ಲ ಕಷ್ಟ ಪಡುತ್ತಾರೆ. ಆದ್ರೆ ಚೀನಾದ ಹಾಂಗ್‍ಕಾಂಗ್ ಮೂಲದ ವಾಂಗ್ ಚಿಂಗ್(24) ತನ್ನ ಆಸೆಯನ್ನು ತೀರಿಸಿಕೊಳ್ಳಲು ಸಿನಿಮೀಯ ರೀತಿ, ಅಂದಾಜು 18 ಲಕ್ಷ ರೂ. ಹಣವನ್ನು ಟೆರೇಸ್ ಮೇಲಿನಿಂದ ಎಸೆದಿದ್ದಾನೆ. ಈ ದುಡ್ಡಿನ ಸುರಿಮಳೆ ನೋಡಲು ಸ್ಥಳದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಅಲ್ಲದೆ ಈ ದೃಶ್ಯವನ್ನು ತನ್ನ ಫೇಸ್‍ಬುಕ್ ಖಾತೆಯಿಂದ ವಾಂಗ್ ಲೈವ್ ವಿಡಿಯೋ ಕೂಡ ಮಾಡಿ ಜನರ ಕಣ್ಣಲ್ಲಿ ಹೀರೋ ಆಗಿದ್ದಾನೆ.
ವಿಡಿಯೋದಲ್ಲಿ ಮೊದಲು ವಾಂಗ್ ಹಣ ತುಂಬಿದ್ದ ದುಬಾರಿ ಕಾರೊಂದರಲ್ಲಿ ಬಂದು, ಬಳಿಕ ಹಣವನ್ನು ಮನೆಯ ಟೆರೇಸ್ ಮೇಲಿಂದ ಎಸೆದು ಹೀರೋ ರೆಂಜಲ್ಲಿ ಪೋಸ್ ನೀಡಿದ್ದಾನೆ. ಈ ದೃಶ್ಯವನ್ನು ನೋಡಲು ಸ್ಥಳದಲ್ಲಿ ಬಹುತೇಕ ಜನರು ಸೇರಿದ್ದರಿಂದ ಕೆಲವು ಸಮಯದ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಆದರಿಂದ ತನ್ನ ವಿಚಿತ್ರ ಆಸೆ ತೀರಿಸಿಕೊಳ್ಳಲು ಹಾಗೂ ಜನರ ಮುಂದೆ ತನ್ನ ಹಣವನ್ನು ಪ್ರದರ್ಶಿಸಲು ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾನೆ ಅಂತ ವಾಂಗ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ನಂತರ ಪೊಲೀಸರು ವಾಂಗ್‍ನನ್ನು ವಿಚಾರಣೆ ಮಾಡಿದ್ದಾರೆ. ಆಗ ಕೆಲದಿನಗಳ ಹಿಂದೆ ವಾಂಗ್ ಟೆರೇಸ್ ಮೇಲಿಂದ ಹಣ ಎಸೆದು ಬಡ ಜನರಿಗೆ ಸಹಾಯ ಮಾಡಿ ಹೀರೋ ಆದ ಹಾಗೆ ಕನಸು ಕಂಡಿದ್ದನಂತೆ. ಆದರಿಂದ ಬಡ ಜನರಿಗೆ ಸಹಾಯ ಮಾಡಲು ಈ ರೀತಿ ಹಣ ಎಸೆದೆ ಎಂದು ಪೊಲೀಸರಿಗೆ ಹೇಳಿದ್ದಾನೆ. ವಿಚಾರಣೆ ವೇಳೆ ಆತ ಎಷ್ಟು ಹಣ ಎಸೆದಿದ್ದಾನೆ ಅಂತ ಪೊಲೀಸರ ಬಳಿ ಬಾಯ್ಬಿಟ್ಟಿಲ್ಲ. ಆದ್ರೆ ಸ್ಥಳಿಯ ಮಾಧ್ಯಮಗಳು ಮಾತ್ರ ವಾಂಗ್ ಸುಮಾರು 18 ಲಕ್ಷ ರೂಪಾಯಿಕ್ಕಿಂತ ಹೆಚ್ಚು ಹಣವನ್ನೇ ತನ್ನ ಕಾರಲ್ಲಿ ತಂದಿದ್ದ ಎಂದು ವರದಿ ಮಾಡಿದೆ.
ಒಂದೆಡೆ ಜನರಿಗೆ ಸಹಾಯ ಮಾಡಲು ವಾಂಗ್ ಹಣ ಎಸೆದಿದ್ದಾನೆ ಅಂತ ಹೇಳಿದರೆ, ಇನ್ನೊಂದೆಡೆ ಸ್ಥಳೀಯರು ಆತ ಸುಮ್ಮನೆ ಪಬ್ಲಿಸಿಟಿಗೆ ಈ ರೀತಿ ಕೆಲಸವನ್ನು ಮಾಡುತ್ತಿರುತ್ತಾನೆ ಅಂತ ಹೇಳುತ್ತಾರೆ. ಅದೇನೆ ಆಗ್ಲಿ ಕೊನೆಗೆ ಆಸೆ ಪೂರೈಸಿಕೊಳ್ಳಲು ಹೋಗಿ ಯುವಕ ಜೈಲು ಸೇರಿದ್ದಂತೂ ವಿಪರ್ಯಾಸ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv