ಕೊಪ್ಪಳ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಯುವಕನೋರ್ವ ನೀರಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.
ಭರತ್ ಗೌಡ(24) ಮೃತ ದುರ್ದೈವಿ. ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ರಾಗಲಪರ್ವಿ ನಿವಾಸಿಯಾದ ಭರತ್ ಸಂಕ್ರಾಂತಿ ಹಿನ್ನೆಲೆ ಸ್ನೇಹಿತರೊಡನೆ ಆನೆಗುಂದಿ ಬಳಿಯ ತುಂಗಭದ್ರಾ ನದಿ ಬಳಿ ಪ್ರವಾಸಕ್ಕೆ ಬಂದಿದ್ದನು. ಇಂದು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಸ್ನೇಹಿತರೊಡನೆ ಭರತ್ ಹೋಗಿದ್ದಾನೆ. ಆದ್ರೆ ಭರತ್‍ಗೆ ಹರಿಯುತ್ತಿದ್ದ ನೀರಿನಲ್ಲಿ ಈಜುಬಾರದೇ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮುಳುಗುತ್ತಿದ್ದ ಭರತ್‍ಗೆ ಜೊತೆಗಿದ್ದವರು ಸಹಾಯ ಮಾಡುವಷ್ಟರಲ್ಲಿ ಆತ ಇಹಲೋಕ ತ್ಯಜಿಸಿದ್ದನು. ಯುವಕನ ಮೃತದೇಹವನ್ನು ಸ್ಥಳೀಯ ಮೀನುಗಾರರು ತೆಪ್ಪ ಬಳಸಿ ಹೊರತೆಗೆದಿದ್ದಾರೆ. ನಗುನಗುತ್ತ ಪ್ರವಾಸಕ್ಕೆ ಬಂದಿದ್ದ ಸ್ನೇಹಿತನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗುವ ಸ್ಥತಿ ಬಂತಲ್ಲ ಅಂತ ಯುವಕನ ಜೊತೆಗಿದ್ದವರು ಕಣ್ಣೀರಿಟ್ಟಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv