21 ವರ್ಷಗಳಿಂದ ಪತ್ನಿ ಶವದೊಂದಿಗಿದ್ದ ವೃದ್ಧನಿಂದ ಕೊನೆಗೂ ಅಂತ್ಯಕ್ರಿಯೆ!

By
2 Min Read

ಬ್ಯಾಂಕಾಕ್: ಪತ್ನಿಯ ಶವದೊಂದಿಗೆ 21 ವರ್ಷಗಳಿಂದ ಬದುಕುತ್ತಿದ್ದ ಥೈಲ್ಯಾಂಡ್‍ನ 72 ವರ್ಷದ ವೃದ್ಧ ಕೊನೆಗೂ ಪತ್ನಿಯ ಅಂತ್ಯಕ್ರಿಯೆಯನ್ನು ಮಾಡಿದ್ದಾನೆ.

ಫೆಟ್ ಕಾಸೆಮ್ ಬ್ಯಾಂಕಾಕ್ ಫೌಂಡೇಶನ್‍ನಿಂದ ಸಹಾಯ ಪಡೆದು ಚಾರ್ನ್ ಜನವಾಚ್ಚಕಲ್ ಅವರು, 21 ವರ್ಷಗಳ ಬಳಿಕ ಕೊನೆಗೂ ಅಂತ್ಯ ಸಂಸ್ಕಾರ ಮಾಡಿ, ತಮ್ಮ ಪತ್ನಿಗೆ ವಿದಾಯ ಹೇಳಿದ್ದಾನೆ.

ರಾಜಧಾನಿ ಬ್ಯಾಂಕಾಕ್‍ನ ಬ್ಯಾಂಗ್ ಖೇನ್ ಜಿಲ್ಲೆಯಲ್ಲಿರುವ ವೃದ್ಧನ ನಿವಾಸದಿಂದ ಆತನ ಪತ್ನಿಯ ಶವವನ್ನು ಫೆಟ್ ಕಾಸೆಮ್ ಬ್ಯಾಂಕಾಕ್ ಫೌಂಡೇಶನ್ ಸಿಬ್ಬಂದಿ ಹೊರಗೆ ತೆಗೆದುಕೊಂಡು ಹೋಗುತ್ತಿರುವ ವೀಡಿಯೋ ಫೇಸ್‍ಬುಕ್‍ನಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹರಿಯಾಣದಲ್ಲಿ 5,000 ವರ್ಷಗಳ ಹಳೆಯ ಆಭರಣ ಕಾರ್ಖಾನೆ ಪತ್ತೆ

ನೀವು ವ್ಯವಹಾರವೊಂದಕ್ಕೆ ಹೋಗುತ್ತಿದ್ದೀರಿ. ಮತ್ತೆ ಮನೆಗೆ ಆದಷ್ಟು ಬೇಗ ಹಿಂತಿರುಗುತ್ತೀರಿ. ಅಲ್ಲಿ ನೀವು ಹೆಚ್ಚು ಸಮಯ ಇರುವುದಿಲ್ಲ ಅಂತ ನಾನು ಭರವಸೆ ನೀಡುತ್ತೇನೆ ಎಂದು ವೃದ್ಧ ಭಾವುಕದಿಂದ ಹೇಳುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.

ಚಾರ್ನ್ ಜನವಾಚ್ಚಕಲ್ ತಾನು ಮಲಗುವ ಕೋಣೆಯಲ್ಲಿ ಮೃತಪಟ್ಟ ತನ್ನ ಹೆಂಡತಿ ಬದುಕಿದ್ದಾಳೆ ಭಾವಿಸಿ ಶವವನ್ನು ಇಟ್ಟುಕೊಂಡಿದ್ದನು. ಹಗಲಿನಲ್ಲಿ ಮನೆಯ ಪಕ್ಕದ ಸಣ್ಣ ಜಾಗದಲ್ಲಿ ಮುದ್ದಾದ ಬೆಕ್ಕುಗಳು ಮತ್ತು ನಾಯಿಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದನು.

ತನ್ನ ಪತ್ನಿ ಸಾವನ್ನು ಎಲ್ಲೂ ದಾಖಲಿಸದೇ ಇದ್ದಿದ್ದರಿಂದ ವೃದ್ಧನ ವಿರುದ್ಧ ಇಲ್ಲಿಯವರೆಗೂ ಅಧಿಕಾರಿಗಳು ಯಾವುದೇ ಕಾನೂನು ಕ್ರಮಕೈಗೊಂಡಿರಲಿಲ್ಲ. ಆದರೆ ಕಳೆದ ತಿಂಗಳು ಮೋಟಾರ್ ಸೈಕಲ್ ಅಪಘಾತದಲ್ಲಿ ಗಾಯಗೊಂಡ ವೃದ್ಧನಿಗೆ ಆಹಾರ ಮತ್ತು ಪಾನೀಯವನ್ನು ನೀಡಲು ಫೌಂಡೇಶನ್‍ನ ಕಾರ್ಯನಿರ್ವಾಹಕರು ಮನೆಗೆ ಭೇಟಿ ನೀಡಿದ್ದ ವೇಳೆ ಶವ ಪೆಟ್ಟಿಗೆಯನ್ನು ಗಮನಿಸಿದ್ದಾರೆ.

ನಂತರ ವೃದ್ಧ ತನ್ನ ಪತ್ನಿಯ ಅಂತ್ಯಕ್ರಿಯೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ಫೌಂಡೇಶನ್‍ನ ಕಾರ್ಯನಿರ್ವಾಹಕರ ಸಹಾಯವನ್ನು ಕೋರಿದ್ದಾರೆ. ಈ ಕುರಿತಂತೆ ವಕೀಲರೊಬ್ಬರು ವೃದ್ಧನ ಸಂಭಾಷಣೆ ನಡೆಸಿದಾಗ, ವೃದ್ಧ ತನ್ನ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದನು. ಆದರೆ ಪತ್ನಿ ತೀರಿಕೊಂಡ ನಂತರ ಆಕೆಯ ಮೃತದೇಹವನ್ನು ಮನೆಯಲ್ಲಿಯೇ ಇರಿಸಿಕೊಳ್ಳಲು ಮಕ್ಕಳು ಒಪ್ಪದೇ ಮನೆ ಬಿಟ್ಟು ಹೋಗಲು ನಿರ್ಧರಿಸಿದರು ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಸದ್ಯಕ್ಕಿಲ್ಲ ಬಂಧನ

ಚಾರ್ನ್ ಜನವಾಚ್ಚಕಲ್ ಅವರು, ಚುಲಾಂಗ್‍ಕಾರ್ನ್ ವಿಶ್ವವಿದ್ಯಾಲಯದ ಫಾರ್ಮಸಿ ಫ್ಯಾಕಲ್ಟಿಯಿಂದ ಪದವಿ ಪಡೆದಿದ್ದರು. ನಂತರ ರಾಯಲ್ ಥಾಯ್ ಸೈನ್ಯದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು ಹಾಗೂ ಅವರ ಪತ್ನಿ ಸಾರ್ವಜನಿಕ ಆರೋಗ್ಯ ಸಚಿವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *