ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಆತ್ಮಹತ್ಯೆ

Public TV
2 Min Read

ಹಾಸನ: ಪ್ರೀತಿಸಿ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಪತ್ನಿ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರಿಂದ ಮನನೊಂದ ಕಾರು ಚಾಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಮರಡಿಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸತೀಶ್(32) ಮೃತ ವ್ಯಕ್ತಿ. ಸತೀಶ್ ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ. ಬದಲಾಗಿ ಮೃತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹೇಮಂತ್ ಹಾಗೂ ಇತರರು ಸೇರಿ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂಬುದಾಗಿ ಸಂಬಂಧಿಕರು ಆರೋಪಿಸಿದ್ದಾರೆ. ಇತ್ತ ಕೈ ಹಿಡಿದ ಗಂಡ ಸತ್ತಿದ್ದರೂ, ಪತ್ನಿ ಮಂಜುಳಾ ಮನೆಯತ್ತ ಸುಳಿಯದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಘಟನೆ ವಿವರ:
ಸಕಲೇಶಪುರ ತಾಲೂಕು ಮರಡಿಕೆರೆ ಗ್ರಾಮದ ಸತೀಶ್, ವೃತ್ತಿಯಲ್ಲಿ ಕಾರು ಚಾಲಕನಾಗಿದ್ದರು. 12 ವರ್ಷಗಳ ಹಿಂದೆ ಪಕ್ಕದ ಕಲ್ಲೂರು ಗ್ರಾಮದ ಮಂಜುಳಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು. ಸತೀಶ್ ಬಡವನಾದರೂ, ಪ್ರೀತಿಗೆ ಕಿಂಚಿತ್ತೂ ಕೊರತೆ ಇರಲಿಲ್ಲ ಎಂಬುದಕ್ಕೆ ಇವರು ಲವ್ ಮ್ಯಾರೇಜ್ ಆಗಿದ್ದೇ ಸಾಕ್ಷಿ. ನಂತರ ಮುದ್ದಾದ ಇಬ್ಬರು ಗಂಡು ಮಕ್ಕಳು, ಜೋಡಿ ಹಕ್ಕಿಗಳ ಜೊತೆಯಾಗಿದ್ದರು. ಕೆಲ ವರ್ಷಗಳವರೆಗೆ ಸತೀಶ್-ಮಂಜುಳಾ ಸಂಸಾರ ಬಂಡಿ ಅನ್ಯೋನ್ಯವಾಗಿಯೇ ಸಾಗುತ್ತಿತ್ತು.

ಯಾವಾಗ ಪಕ್ಕದ ಊರಿನ ಹೇಮಂತ್ ಅನ್ನೋ ವ್ಯಕ್ತಿ ಸತೀಶ್ ಸಂಸಾರದೊಳಗೆ ಎಂಟ್ರಿ ಕೊಟ್ಟನೋ, ಅಲ್ಲೀವರೆಗೂ ಚೆನ್ನಾಗಿಯೇ ಇದ್ದ ಸಂಸಾರ ಹಳಿತಪ್ಪಿತು. ಸ್ನೇಹಿತನ ಸೋಗಿನಲ್ಲಿ ಬಂದ ಹೇಮಂತ್, ಸತೀಶ್ ಪತ್ನಿಯನ್ನೇ ಬಲೆಗೆ ಬೀಳಿಸಿಕೊಂಡು ಬಿಟ್ಟನು. ಸತೀಶ್ ಕಾರು ಬಾಡಿಗೆಗೆ ಹೋದರೆ, ಇಬ್ಬರು ಗಂಡು ಮಕ್ಕಳಿದ್ದರೂ ಮಂಜುಳಾ ಹೇಮಂತ್‍ನೊಂದಿಗೆ ಮೈ ಮರೆಯುತ್ತಿದ್ದಳು. ಈ ವಿಷಯ ಸತೀಶ್ ಗೆ ತಿಳಿಯುತ್ತಿದ್ದಂತೆಯೇ ಅಕ್ಷರಶಃ ನೊಂದು ಹೋಗಿದ್ದನು. ಇದೇ ವಿಚಾರವಾಗಿ ಅನೇಕ ಸಲ ಪತಿ-ಪತ್ನಿಯ ನಡುವೆ ಜಗಳ ನಡೆದು, ಪ್ರಕರಣ ಯಸಳೂರು ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.

ಈ ಬಗ್ಗೆ ಸತೀಶ್ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಮನನೊಂದ ಸತೀಶ್, ಗುರುವಾರ ಮನೆಯಲ್ಲಿ ಯಾರೂ ಇಲ್ಲದಾಗ ವಿಷ ಕುಡಿದಿದ್ದಾರೆ. ಇದನ್ನು ತಿಳಿದ ತಾಯಿ ಹಾಗೂ ಇತರರು ಕೊಡ್ಡಿಪೇಟೆ ನಂತರ ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಇದೀಗ ವೃದ್ಧ ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ಆದರೆ ಸತೀಶ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಕೆಲ ದಿನಗಳಿಂದ ಹೇಮಂತ್ ಹಾಗೂ ಇತರರಿಂದ ಸತೀಶ್ ಗೆ ಕೊಲೆ ಬೆದರಿಕೆ ಇತ್ತು. ಹೇಮಂತ್ ಹಣ ಬಲದಿಂದ ಪೊಲೀಸರನ್ನ ಚೆನ್ನಾಗಿಟ್ಟುಕೊಂಡಿದ್ದನು. ಇದೇ ಕಾರಣಕ್ಕೆ ನೀವು ನನ್ನನ್ನು ಏನೂ ಮಾಡೋಕೆ ಆಗೋದಿಲ್ಲ ಎಂದು ಹೇಮಂತ್ ಊರಿನಲ್ಲಿ ಮೆರೆಯುತ್ತಿದ್ದನು. ಅದೇ ಹೇಮಂತ್, ತನ್ನವರೊಂದಿಗೆ ಸೇರಿ ಸತೀಶ್ ಮೇಲೆ ಹಲ್ಲೆ ಮಾಡಿದ್ದಲ್ಲದೆ ಮದ್ಯದೊಂದಿಗೆ ಬಲವಂತವಾಗಿ ವಿಷ ಕುಡಿಸಿ ಸಾವಿಗೆ ಕಾರಣವಾಗಿದ್ದಾರೆ. ಈ ಬಗ್ಗೆ ಸಾಯುವ ಮುನ್ನ ಮಾತನಾಡಿರುವ ಆಡಿಯೋದಲ್ಲಿ ಸತೀಶ್, ಹೇಮಂತ್, ಪ್ರತಾಪ್ ಎಂಬವರ ಹೆಸರು ಹೇಳಿದ್ದಾನೆ. ಪ್ರೀತಿಸಿದ ಹೆಂಡತಿ ಮೋಸ ಮಾಡಿದಳು. ಆಕೆ ನನ್ನಿಂದ ನಾನು ದೂರವಾದರೂ, ಮಕ್ಕಳನ್ನು ಚೆನ್ನಾಗಿ ಸಾಕುವೆ ಎಂದು ಅನೇಕ ಬಾರಿ ಹೇಳಿದ್ದಳು. ಆದರೆ ಈಗ ಹೀಗೆ ಷಡ್ಯಂತ್ರ ಮಾಡಿ ಆತನನ್ನೇ ಮುಗಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ತನ್ನ ಸ್ವಚ್ಛಂದ ಲವ್ವಿ-ಡವ್ವಿ ಆಟಕ್ಕೆ ಗಂಡ ಅಡ್ಡಿ ಬರುತ್ತಾನೆ ಅನ್ನೋ ಕಾರಣದಿಂದಲೇ ಇತ್ತೀಚೆಗೆ ಸತೀಶ್ ನನ್ನು ಬಿಟ್ಟು ತವರು ಮನೆ ಸೇರಿದ್ದ ಮಂಜುಳಾ, ಗಂಡ ಸತ್ತರೂ ಸುಳಿಯದಿರುವುದು ಆಕೆಯ ಬಗೆಗಿನ ಅನುಮಾನವನ್ನು ಮತ್ತಷ್ಟು ಹಿಗ್ಗಿಸಿದೆ.

Share This Article
Leave a Comment

Leave a Reply

Your email address will not be published. Required fields are marked *