ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಆಪ್ತ ಸಹಾಯಕ ಅಂತ ನಂಬಿಸಿ ಲಕ್ಷ-ಲಕ್ಷ ಮೋಸ!

Public TV
3 Min Read

ಮೈಸೂರು: ಪವರ್ ಸ್ಟಾರ್ ಜೊತೆ ಮಾತಾಡಿಸ್ತೀನಿ, ಅವರ ಜೊತೆನೇ ಇರೋ ಹಾಗೆ ಕೆಲಸ ಕೊಡಿಸ್ತೀನಿ, ಅವರ ಮನೆಗೆ ಕರೆದುಕೊಂಡು ಹೋಗ್ತೀನಿ ಎಂದು ವ್ಯಕ್ತಿಯೊಬ್ಬ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಆಪ್ತ ಸಹಾಯಕ ಅಂತ ಸುಳ್ಳು ಹೇಳಿ ನಂಬಿಸಿ ಮೈಸೂರಿನ ನಾಲ್ಕಾರು ಮಂದಿಗೆ ಲಕ್ಷಾಂತರ ಹಣಕ್ಕೆ ಉಂಡೆನಾಮ ಇಟ್ಟು ಪರಾರಿಯಾಗಿದ್ದಾನೆ.

ತನ್ನ ತಂಗಿ ಮದುವೆಯ ಹಣಕ್ಕಾಗಿ ಅಮಾಯಕರನ್ನು ಪುನೀತ್ ರಾಜ್‍ಕುಮಾರ್ ಹೆಸರಲ್ಲಿ ಬಲೆಗೆ ಬೀಳಿಸಿಕೊಂಡ ಚಾಲಾಕಿ ಲಕ್ಷಾಂತರ ಹಣ ಪಡೆದು ಮದುವೆ ನಂತರ ಎಸ್ಕೇಪ್ ಆಗಿದ್ದಾನೆ. ಪುನೀತ್ ರಾಜ್ ಕುಮಾರ್ ಸಹಾಯಕ ಎಂದು ನಂಬಿ ಹಣ ಕೊಟ್ಟವರು ಬೇಸ್ತುಬಿದ್ದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಬೆಂಗಳೂರಿನ ಶ್ರೀನಿವಾಸನಗರದ ರವಿ ಅಮಾಯಕರನ್ನು ವಂಚಿಸಿ ಪರಾರಿಯಾದ ಖದೀಮ. ಮೂಲತಃ ಬನ್ನೂರಿನ ಅಂಕನಹಳ್ಳಿಯ ರವಿ ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದಾನೆ. ಕಳೆದ ವರ್ಷ ಮೈಸೂರು ತಾಲೂಕಿನ ಕುಪ್ಯಾ ಗ್ರಾಮಕ್ಕೆ ಬಂದ ರವಿ ಮೊದಲು ತಮ್ಮ ದೂರದ ಸಂಬಂಧಿಕರಾದ ರಮೇಶ್ ಅವರನ್ನು ಪರಿಚಯಿಸಿಕೊಂಡು ಗರಿಗರಿ ಬಟ್ಟೆ, ಕೊರಳು ಹಾಗೂ ಕೈಗಳಲ್ಲಿ ಚಿನ್ನದ ಆಭರಣಗಳನ್ನ ಧರಿಸಿ ಶೋ ಆಫ್ ಮಾಡಿದ್ದನು. ರವಿ ತಾನು ಬೆಂಗಳೂರಿನಲ್ಲಿ ಪುನೀತ್ ರಾಜ್‍ಕುಮಾರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತಿದ್ದೀನಿ ಎಂದು ನಂಬಿಸಿದ್ದಾನೆ.

ರವಿಯ ಶ್ರೀಮಂತಿಕೆಯ ಮಾತುಗಳನ್ನ ರಮೇಶ್ ನಂಬಿದ್ದಾರೆ. ಇದೇ ವೇಳೆ ರವಿ ತಂಗಿ ಶೃತಿ ಮದುವೆ ಫಿಕ್ಸ್ ಆಗಿದೆ. ಮದುವೆ ಖರ್ಚಿಗೆ ಹಣ ಹೊಂದಿಸಲು ಹಾಕಿದ ಸ್ಕೆಚ್ ಗೆ ಮೊದಲು ರಮೇಶ್ ಬಲಿಯಾಗಿದ್ದಾರೆ. ರಮೇಶ್ ರವರ ಪುತ್ರ ಗಿರೀಶ್‍ಗೆ ತನ್ನ ಪ್ರಭಾವ ಬೀರಿ ಕೆಲಸ ಕೊಡಿಸುವ ಆಮಿಷವೊಡ್ಡಿದ ರವಿ ಮದುವೆಗಾಗಿ ಲಕ್ಷ ಲಕ್ಷಗಟ್ಟಲೆ ಹಣ ಪಡೆದಿದ್ದಾನೆ. ಇದೇ ಅವಧಿಯಲ್ಲಿ ರಮೇಶ್ ಮೂಲಕ ಗುರುಮೂರ್ತಿ ಎಂಬವರನ್ನು ಪರಿಚಯಿಸಿಕೊಂಡು ಪುನೀತ್ ರಾಜ್‍ಕುಮಾರ್ ಕಾರಿಗೆ ಡ್ರೈವರ್ ಮಾಡುವುದಾಗಿ ಆಮಿಷ ತೋರಿಸಿ ಸುಮಾರು 50 ಗ್ರಾಂ ಚಿನ್ನದ ಸರ ಪಡೆದಿದ್ದಾನೆ.

ಈತನ ಐಶಾರಾಮಿ ಗೆಟಪ್ ಗೆ ಹಾಗೂ ಆಗಾಗ ಪುನೀತ್ ರಾಜ್‍ಕುಮಾರ್ ಹೆಸರು ಹೇಳುತ್ತಾ ಅವರೊಂದಿಗೆ ಚಿತ್ರರಂಗದ ಕೆಲವು ವ್ಯವಹಾರದ ಆಸೆ ತೋರಿಸಿದ ರವಿ ಟ್ರಾವಲ್ಸ್ ಮಾಲೀಕರಾದ ಜೆರ್ರಿ ಎಂಬವರ ಬಳಿ ಒಂದು ಲಕ್ಷ ಪಡೆದಿದ್ದಾನೆ. ತಂಗಿ ಮದುವೆಗಾಗಿ ಕಲ್ಯಾಣಮಂಟಪಕ್ಕೆ ಹಣ ನೀಡಲು ರಮೇಶ್ ಪುತ್ರ ಗಿರೀಶ್ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಸಿ ಆತನ ಚೆಕ್ ಗಳನ್ನು ನೀಡಿ ಟೋಪಿ ಹಾಕಿದ್ದಾನೆ. ಇಷ್ಟಕ್ಕೇ ನಿಲ್ಲದ ರವಿಯ ಕುತಂತ್ರ ವಿಡಿಯೋಗ್ರಾಫರ್ ಕಿರಣ್ ಸಹ ಪುನೀತ್ ಬಳಿ ಆರ್ಡರ್ ಗಳನ್ನ ಕೊಡಿಸುವ ಆಮಿಷ ತೋರಿಸಿ ಮದುವೆ ಕವರೇಜ್ ಮಾಡಿಸಿಕೊಂಡು ಕೈ ಕೊಟ್ಟಿದ್ದಾನೆ.

ಫ್ಲವರ್ ಡೆಕೋರೇಷನ್ ಮಾಡುವ ಪವನ್ ಎಂಬವರಿಗೂ ಇದೇ ಕಹಿ ಅನುಭವವಾಗಿದೆ. ಪುನೀತ್ ರಾಜ್ ಕುಮಾರ್ ಹೆಸರು ಬಳಸಿದ ರವಿ ನಾಲ್ಕಾರು ಮಂದಿಯಿಂದ ಲಕ್ಷಾಂತರ ರೂ. ಪಡೆದು ತನ್ನ ತಂಗಿ ಮದುವೆ ಮುಗಿಯುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದಾನೆ. ತಂಗಿಯ ಮದುವೆ ಆಮಂತ್ರಣ ಪತ್ರದಲ್ಲಿಯೂ ಪುನೀತ್ ರಾಜ್‍ಕುಮಾರ್ ರವರ ಚಿಕ್ಕಂದಿನಲ್ಲಿ ಕರೆಯುತ್ತಿದ್ದ ಲೋಹಿತ್ ಹೆಸರು ಹಾಕಿಸಿ ಮಂಕುಬೂದಿ ಎರಚಿದ್ದಾನೆ. ಮದುವೆ ನಂತರ ರವಿ ನಾಪತ್ತೆಯಾದಾಗಲೇ ತಾವು ಮೋಸ ಹೋಗಿರುವುದು ಖಚಿತವಾಗಿದೆ.

ಬೆಂಗಳೂರಿನ ಮನೆಯಲ್ಲೂ ರವಿ ಕೈಗೆ ಸಿಗುತ್ತಿಲ್ಲ. ಮೈಸೂರಿನತ್ತ ತಲೆಯೂ ಹಾಕುತ್ತಿಲ್ಲ. ರವಿಯ ಶೋ ಆಫ್ ಮಾತಿಗೆ ಬೆರಗಾಗಿ ಹಣ ಕೊಟ್ಟವರು ಆಕಾಶ ನೋಡುವಂತಾಗಿದೆ. ಪುನೀತ್ ರಾಜ್‍ಕುಮಾರ್ ಗೂ ಈತನಿಗೂ ಸಂಬಂಧ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರವಿ ಮಾತ್ರ ಪುನೀತ್ ಹೆಸರು ಬಳಸಿ ವಂಚಿಸಿರುವುದು ಮಾತ್ರ ನಿಜ. ಅತಿ ಬುದ್ಧಿವಂತಿಕೆಯಿಂದ ಹಣ ಲಪಟಾಯಿಸಿದ ವಂಚಕನ ಮೇಲೆ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *