ವರದಕ್ಷಿಣೆಯಾಗಿ ಬೈಕ್ ಕೇಳಿದ್ದ ಪತಿ – ಕೊಡದಿದ್ದಕ್ಕೆ ತವರು ಮನೆಯಿಂದ ಕರೆತಂದು ಪತ್ನಿಯನ್ನೇ ಕೊಂದ!

By
1 Min Read

ಲಕ್ನೋ: ಬೈಕ್ ಮತ್ತು 3 ಲಕ್ಷ ರೂ. ವರದಕ್ಷಿಣೆ ನೀಡಿಲ್ಲ ಎಂದು ತವರು ಮನೆಗೆ ಹೋಗಿದ್ದ ಪತ್ನಿಯನ್ನು ಪತಿ ಮನೆಗೆ ಕರೆದುಕೊಂಡು ಬಂದು ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಅಮ್ರೋಹಾದಲ್ಲಿ ನಡೆದಿದೆ.

ಬೈಖೇಡ ಗ್ರಾಮದ ಸುಂದರ್ ಎಂಬಾತ ಎರಡು ವರ್ಷಗಳ ಹಿಂದೆ ಮೀನಾ ಎಂಬಾಕೆಯನ್ನು ಮದುವೆಯಾಗಿದ್ದ. ಅಂದಿನಿಂದ ವರದಕ್ಷಿಣೆಗಾಗಿ (Dowry) ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಕಳೆದ ಒಂದು ತಿಂಗಳಿಂದ ಮೀನಾ ಸೋಹರ್ಕಾದಲ್ಲಿರುವ ತನ್ನ ತಂದೆಯ ಮನೆಯಲ್ಲಿಯೇ ಸೇರಿದ್ದಳು. ಸುಂದರ್ ಪ್ರತಿದಿನ ಅವಳನ್ನು ಭೇಟಿಯಾಗುತ್ತಿದ್ದ. ಅದರಂತೆ ಭಾನುವಾರ ರಾತ್ರಿಯೂ ಆಕೆಯನ್ನು ಭೇಟಿ ಮಾಡಿ ಬಳಿಕ ತನ್ನ ಮನೆಗೆ ಕರೆತಂದು ಹತ್ಯೆಗೈದಿದ್ದಾನೆ.

ಆರೋಪಿ ಸುಂದರ್ ಆಕೆಯ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಕೊಲೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮೃತ ಮೀನಾಳ ತಂದೆ ತಂದೆ ವಿಜಯ್ ಖಡಕ್ ಬನ್ಶಿಯವರು, ಸುಂದರ್, ಆತನ ತಾಯಿ, ಸಹೋದರಿ ಮತ್ತು ಇತರ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಾಗಿ ಶೋಧ ನಡೆಯುತ್ತಿದೆ.

Share This Article