ಅತ್ತೆಯ ಕೈ ಮುರಿದು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಅಳಿಯ!

Public TV
2 Min Read

ಚಾಮರಾಜನಗರ: ಆಕೆ ಮದುವೆಯಾಗಿ 8 ತಿಂಗಳಾಗಿದೆ. ತವರು ಮನೆಯಿಂದ ಆಗಾಗ ದುಡ್ಡು ತರುವಂತೆ ಪತ್ನಿಯನ್ನು ಪತಿ ಪೀಡಿಸುತ್ತಿದ್ದಾನೆ. ಇದರಿಂದ ಮನನೊಂದು ಪತ್ನಿ ತವರು ಮನೆ ಸೇರಿದ್ದಾಳೆ. ಹೀಗಿರುವಾಗ ಬುಧವಾರ ರಾತ್ರಿ ಪತ್ನಿ ಮನೆಗೆ ಬಂದ ಪತಿ ಎರಡು ಬೈಕ್ ಗಳನ್ನು ಪೆಟ್ರೋಲ್ ಹಾಕಿ ಸುಟ್ಟಿದ್ದಲ್ಲದೇ ಅತ್ತೆಯ ಕೈಯನ್ನು ಮುರಿದು ಹಾಕಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗ್ತಿಲ್ಲ ಅಂತಾ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಪತ್ನಿಗೆ ವರದಕ್ಷಿಣೆ (Dowry) ತರುವಂತೆ ಪತಿ ಪೀಡಿಸುತ್ತಿದ್ದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಅತ್ತೆಯ ಕೈ ಮುರಿದು ಬೈಕ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಚಾಮರಾಜನಗರದ ಗಾಳಿಪುರ ಬಡಾವಣೆಯಲ್ಲಿ ನಡೆದಿದೆ. 8 ತಿಂಗಳ ಹಿಂದೆ ಗಾಳಿಪುರ ಬಡಾವಣೆಯ ಹತೀಜಾ ಖೂಬ್ರಾಳನ್ನು ಚಾಮರಾಜನಗರ ತಾಲೂಕಿನ ಸರಗೂರಿನ ಸಲ್ಮಾನ್ ಅಹಮದ್ ಷರೀಪ್ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಕೆಲವು ದಿನಗಳ ನಂತರ ಪತ್ನಿಗೆ ವರದಕ್ಷಿಣೆ ತರುವಂತೆ ಸಲ್ಮಾನ್ ಅಹಮದ್ ಷರೀಪ್‌ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ವರದಕ್ಷಿಣೆ ಕಿರುಕುಳದ ಬಗ್ಗೆ ಕೆಲ ತಿಂಗಳ ಹಿಂದೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ನ್ಯಾಯ ಸಿಗಲಿಲ್ಲ ಎಂದು ಹತೀಜಾ ಖೂಬ್ರಾ ಆರೋಪಿಸಿದ್ದಾರೆ.

ಬುಧವಾರ ರಾತ್ರಿ ಪತ್ನಿಯ ಮನೆಗೆ ಬಂದಿದ್ದ ಸಲ್ಮಾನ್ ಅಹಮದ್ ಷರೀಪ್, ಹಣ ಕೊಡುವಂತೆ ಪತ್ನಿಯ ಕುಟುಂಬಸ್ಥರನ್ನು ಕೇಳಿದ್ದಾನೆ. ನಮ್ಮ ಬಳಿ ಯಾವುದೇ ಹಣವಿಲ್ಲವೆಂದು ಪತ್ನಿಯ ಮನೆಯವರು ಹೇಳುತ್ತಿದ್ದಂತೆ ಜಗಳ ತೆಗೆದು ಬೈಕ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ. ಮಾವ ಹಾಗೂ ಅತ್ತೆಯೊಂದಿಗೆ ಗಲಾಟೆ ಮಾಡಿದ್ದಲ್ಲದೇ ದೊಣ್ಣೆಯಲ್ಲಿ ಹೊಡೆದು ಒಂದೇ ಏಟಿಗೆ ಅತ್ತೆಯ ಕೈ ಮುರಿದಿದ್ದಾನಂತೆ. ಪದೇ ಪದೇ ಮನೆಯ ಹತ್ತಿರ ಬಂದು ಕಿರುಕುಳ ಕೊಡ್ತಿರುವ ಈತನ ವಿರುದ್ಧ ಹಿಂದೆಯೂ ದೂರು ದಾಖಲಿಸಿದ್ದು, ಪೊಲೀಸರು ಸೂಕ್ತ ಕ್ರಮ ವಹಿಸಿಲ್ಲ ಅಂತಾ ಆರೋಪ ಮಾಡ್ತಿದ್ದಾರೆ.

ಒಟ್ಟಿನಲ್ಲಿ ಮದುವೆಯಾದ ಎಂಟು ತಿಂಗಳಲ್ಲಿ ಸಂಸಾರದಲ್ಲಿ ಬಿರುಕು ಮೂಡಿದೆ. ತವರು ಮನೆಗೂ ಬಂದು ಹಣ ಕೊಡುವಂತೆ ಪೀಡಿಸುತ್ತಿದ್ದಾನೆ. ಪತಿಯ ದರ್ಪದ ಬಗ್ಗೆ ದೂರು ಕೊಟ್ರು ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿ ಪೆಟ್ರೋಲ್ ಬೈಕ್ ಬೇರೆ ಸುಟ್ಟು ಹಾಕಿದ್ದಾನೆ. ನಮ್ಮ ಪತಿಯ ಕಿರುಕುಳ ತಪ್ಪಿಸಿ ಅಂತಾ ಪತ್ನಿ ಮನವಿ ಮಾಡಿಕೊಂಡಿದ್ದಾರೆ.

Share This Article