ಮಗಳಿಗೆ ಜಮೀನು ಕೊಡುವುದಾಗಿ ಹೇಳಿದ್ದಕ್ಕೆ ತಾಯಿಯ ಹತ್ಯೆ – ಆರೋಪಿ ಅರೆಸ್ಟ್

Public TV
1 Min Read

ತುಮಕೂರು: ಮಗಳ ಹೆಸರಿಗೆ ಆಸ್ತಿ ವರ್ಗಾಯಿಸುವುದಾಗಿ ಹೇಳಿದ ತಾಯಿಯನ್ನು ವ್ಯಕ್ತಿಯೊಬ್ಬ ಹತ್ಯೆಗೈದ ಘಟನೆ ಪಾವಗಡದ ಮಾಚಮಾರನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಚಂದ್ರಕ್ಕ (50) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಜೂ.20 ರಂದು ಮಹಿಳೆಯ ಹತ್ಯೆ ನಡೆದಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮಹಿಳೆಯ ಮಗ ಆಂಜನೇಯಲು ಹಾಗೂ ಆತನ ಬಾವ ಪ್ರಭಾಕರ್‍ನನ್ನು ಬಂದಿಸಿದ್ದಾರೆ. ವಿಚಾರಣೆ ವೇಳೆ ಆಸ್ತಿ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಮನೆಯ ಗೋಡೆ ಕುಸಿದು ನಾಲ್ವರ ದುರ್ಮರಣ

ಜೂ. 20ರಂದು ಚಂದ್ರಕ್ಕ ಬೇವಿನ ಬೀಜ ಸಂಗ್ರಹಿಸಲು ತೆರಳಿದ್ದ ವೇಳೆ, ಮಹಿಳೆಯನ್ನ ಕತ್ತುಕೊಯ್ದು ಹತ್ಯೆ ಮಾಡಲಾಗಿತ್ತು. ತನ್ನ ತಾಯಿಯನ್ನ ಹತ್ಯೆಗೈದವರನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ಸ್ವತಃ ಹಂತಕ ಮಗನೇ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪೊಲೀಸ್ ತನಿಖೆ ವೇಳೆ ಚಂದ್ರಕ್ಕನ ಮಗ ಆಂಜನೇಯಲುನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಪೊಲೀಸರು ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯನ್ನು ವಿಚಾರಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಯಾರಿಗೂ ಹೇಳದಂತೆ ಪ್ರತ್ಯಕ್ಷದರ್ಶಿಗೂ ಸಹ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ತನೀಖೆ ವೇಳೆ ತಿಳಿದು ಬಂದಿದೆ.

ಮೃತ ಚಂದ್ರಕ್ಕ ತನ್ನ ಹೆಸರಲ್ಲಿದ್ದ ಐದು ಎಕರೆ ಜಮೀನನ್ನು ಮಗಳ ಹೆಸರಿಗೆ ವರ್ಗಾಯಿಸುವುದಾಗಿ ಹೇಳಿದ್ದರು. ಇದೇ ವಿಷಯವಾಗಿ ತಾಯಿ ಮತ್ತು ಮಗನ ನಡುವೆ ಗಲಾಟೆಯಾಗಿತ್ತು. ಇದರಿಂದ ಆರೋಪಿಗಳು ಆಕೆಯನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲಾಸ್ ವೇಗಾಸ್‌ನಲ್ಲಿ ಗುಂಡಿನ ದಾಳಿ- ಐವರ ದುರ್ಮರಣ

Share This Article