ಪ್ರಿಯಕರನ ಜೊತೆ ಸುತ್ತಾಡಿದ್ದಕ್ಕೆ 13ರ ಮಗಳನ್ನೇ ಕೊಂದೇಬಿಟ್ಟ!

Public TV
1 Min Read

ನವದೆಹಲಿ: ಹುಡುಗನ ಜೊತೆ ಸುತ್ತಾಡಿದ್ದಕ್ಕೆ 7ನೇ ತರಗತಿ ಓದುತ್ತಿದ್ದ ಮಗಳನ್ನೇ ಕೊಂದ ತಂದೆಯನ್ನು ದೆಹಲಿಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಸುದೇಶ್ ಕುಮಾರ್ ಬಂಧನಕ್ಕೆ ಒಳಗಾದ ವ್ಯಕ್ತಿ. ನೆರೆ ಮನೆಯವನ ಜೊತೆ ಪ್ರೇಮ ಸಂಬಂಧವನ್ನು ಹೊಂದಿದ್ದಕ್ಕೆ ನಾನೇ ಮಗಳನ್ನು ಕೊಲೆ ಮಾಡಿದ್ದೇನೆ ಎಂದು  ಸುದೇಶ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ.

ಏನಿದು ಪ್ರಕರಣ?
13 ವರ್ಷದ ಅಪ್ರಾಪ್ತ ಹುಡುಗಿಯು ಬುಧವಾರದಂದು ಕಾಣೆಯಾಗಿದ್ದಳು. ಮಗಳು ಕಾಣೆಯಾದ ಹಿನ್ನೆಲೆಯಲ್ಲಿ ತಂದೆ ಸುದೇಶ್ ಕುಮಾರ್ ದೆಹಲಿಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದ. ನಾಪತ್ತೆ ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಹುಡುಗಿಯ ಮೃತದೇಹ ಉತ್ತರ ಪ್ರದೇಶದ ಟ್ರೋನಿಕಾ ನಗರದಲ್ಲಿ ಶುಕ್ರವಾರ ಸಿಕ್ಕಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ ಸುದೇಶ್ ಕುಮಾರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಮಗಳನ್ನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ತನ್ನ ಮಗಳು ನೆರೆ ಮನೆಯ ಹುಡುಗನ ಜೊತೆ ಪ್ರೇಮ ಸಂಬಂಧವನ್ನ ಬೆಳೆಸಿದ ಕಾರಣಕ್ಕೆ ಈ ಕೃತ್ಯವನ್ನ ಎಸಗಿರುವುದಾಗಿ ಹೇಳಿದ್ದಾನೆ.

ಪೊಲೀಸರಿಗೆ ಹೇಳಿದ್ದು ಏನು?
ಮಗಳು ಹತ್ತಿರದ ಅಂಗಡಿಯಿಂದ ತಿಂಡಿ ತರುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದಳು. ಈ ಸಮಯಕ್ಕೆ ಆಕೆಯನ್ನು ನಾನು ಹಿಂಬಾಲಿಸಿದೆ. ಈ ವೇಳೆ ಆಕೆ ಪ್ರಿಯಕರನೊಡನೆ ಮಾತನಾಡುವುದನ್ನ ಕಂಡು ಆಕ್ರೋಶಕ್ಕೆ ಒಳಗಾಗಿ, ಆಕೆಗೆ ಸರಿಯಾದ ಪಾಠ ಕಲಿಸಬೇಕು ಎಂದು ನಿರ್ಧರಿಸಿದೆ. ಬಳಿಕ ಮಗಳನ್ನು ತನ್ನ ಬೈಕ್‍ನಲ್ಲಿ ಕೂರಿಸಿಕೊಂಡು ಲೋನಿ ರಸ್ತೆಯ ನಗರಕ್ಕೆ ಕರೆದೊಯ್ದು ಗಂಟಲನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದೆ. ಕೊಲೆ ಮಾಡಿದ ನಂತರ ಪ್ರಕರಣದ ದಿಕ್ಕನ್ನು ತಪ್ಪಿಸಲು ಮಗಳು ಕಾಣೆಯಾಗಿದ್ದಾಳೆ ಎಂದು  ದೂರನ್ನು ದಾಖಲಿಸಿದ್ದೆ ಎಂದಿದ್ದಾನೆ.

ಅನುಮಾನ ಬಂದಿದ್ದು ಹೇಗೆ?
ವಿಚಾರಣೆ ಪ್ರಾರಂಭಿಸಿದ ಪೊಲೀಸರಿಗೆ, ರಸ್ತೆ ಬಳಿಯ ಸಿಸಿಟಿವಿಯಲ್ಲಿ ಆ ಹುಡುಗಿಯನ್ನ ವ್ಯಕ್ತಿಯೊಬ್ಬ ಬೈಕ್‍ನಲ್ಲಿ ಕೂರಿಸಿಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು. ಸುದೇಶ್ ಬಳಿ ಅದೇ ರೀತಿಯ ಬೈಕ್ ಮತ್ತು ಹೆಲ್ಮೆಟ್ ಇರುವುದನ್ನು ಗಮನಿಸಿದ ಪೊಲೀಸರು ಶಂಕೆಯ ಆಧಾರದಲ್ಲಿ ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *