ದುಬೈನಲ್ಲಿ ಉದ್ಯೋಗ- ಭಾರತದಲ್ಲಿ ನಾಲ್ಕು ಮದುವೆ

Public TV
2 Min Read

ಚೆನೈ: ದುಬೈನಲ್ಲಿ ಉದ್ಯೋಗ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಿನಿಮಾ ಶೈಲಿಯಲ್ಲಿ ಒಬ್ಬರಿಗೂ ತಿಳಿಯದಂತೆ ಬರೋಬ್ಬರಿ 4 ಮದುವೆಯಾಗಿರುವ ಘಟನೆ ಬೆಳಕಿದೆ ಬಂದಿದೆ.

ತಮಿಳುನಾಡಿನ ಮಡಕೋಟನ್ ನಿವಾಸಿಯಾದ ಗಂಗನಾಥನ್ ನಾಲ್ಕು ಮದುವೆಯಾದ ವ್ಯಕ್ತಿಯಾಗಿದ್ದು, 2008 ರಲ್ಲಿ ರಾಮನಾಥಪುರ ಜಿಲ್ಲೆಯ ನಿವಾಸಿಯಾದ ಕೋಮಲಾದೇವಿಯನ್ನ ಮದುವೆಯಾಗಿದ್ದಾನೆ. ಬಿಕಾಂ ಪದವಿ ಪಡೆದಿದ್ದ ಪತ್ನಿಯೊಂದಿಗೆ ದುಬೈ ತೆರಳಿ ಅಲ್ಲಿ ಹೊಸದೊಂದು ಕಂಪನಿ ಸ್ಥಾಪಿಸಿ ಸ್ಥಿರವಾಗಿದ್ದನು. ಆದರೆ ಕೆಲ ದಿನಗಳ ಬಳಿಕ ರಾತ್ರಿ ವೇಳೆಯಲ್ಲಿ ಪತಿ ಮನೆಗೆ ಬಾರದ ಕಾರಣ ಕೋಮಲಾದೇವಿ ಆತನೊಂದಿಗೆ ಜಗಳ ಮಾಡಿದ್ದಳು. ಆ ಬಳಿಕ ಆಕೆಯನ್ನು ತವರಿಗೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದ ಗಂಗನಾಥನ್ ಆಗಾಗ ಬಂದು ನೋಡಿಕೊಂಡು ಹೋಗುತ್ತಿದ್ದನು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಒಮ್ಮೆ ಗಂಗನಾಥನ್ ಮನೆಗೆ ಬಂದ ಸಂದರ್ಭದಲ್ಲಿ ಪತಿಯ ಮೊಬೈಲ್‍ಗೆ ಕರೆಯೊಂದು ಬಂದಿದ್ದು, ಇದನ್ನು ಕೋಮಲಾ ದೇವಿ ರಿಸೀವ್ ಮಾಡಿದ್ದರು. ಆ ಬಳಿಕ ಅನುಮಾನಗೊಂಡ ಆಕೆ, ಪತಿಯ ಮೊಬೈಲ್‍ಗೆ ಬಂದ ಕರೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಈ ವೇಳೆ ಆತ 2ನೇ ಮದುವೆ ಆಗಿರುವುದು ಬೆಳಕಿಗೆ ಬಂದಿತ್ತು. ಆದರೆ ಇದನ್ನು ಗಂಗನಾಥನ್ ಅಲ್ಲಗೆಳೆದಿದ್ದನು.

ಇದರೊಂದಿಗೆ ಮತ್ತಷ್ಟು ಅನುಮಾನಗೊಂಡ ಕೋಮಲಾದೇವಿ ಪತಿಯ ಮೊಬೈಲ್ ನಿಂದ ರಹಸ್ಯವಾಗಿ ಇತರೇ ಫೋನ್ ಕರೆ ಮಾಹಿತಿಯನ್ನು ಕೂಡ ಸಂಗ್ರಹ ಮಾಡಿದ್ದರು. ಈ ವೇಳೆ ಆತ ಚಿನ್ನ ಸೆಲಂಗೆ ಸೇರಿದ ಕವಿತಾ ಎಂಬಾಕೆಯನ್ನ ಮದುವೆ ಆಗಿರುವುದು ಖಚಿತವಾಗಿತ್ತು. ಅಲ್ಲದೆ ಆತನ ಮೊಬೈಲ್ ನಲ್ಲಿ ಬೇರೆ ಮಹಿಳೆಯೊಂದಿಗೆ ಇದ್ದ ಫೋಟೋ, ಆಕೆಯೊಂದಿಗೆ ಸಂಭಾಷಣೆ ನಡೆಸಿದ್ದ ಸಂದೇಶಗಳು ಲಭ್ಯವಾಗಿತ್ತು. ಈ ಆಧಾರದ ಮೇಲೆ ಆತನ ಮೇಲೆ ರಾಮನಾಥಪುರದ ಮಹಿಳಾ ಪೊಲೀಸ್ ಠಾಣೆಗೆ ಪತ್ನಿ ದೂರು ನೀಡಿದ್ದಳು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರಿಗೆ ಮತ್ತಷ್ಟು ಶಾಕಿಂಗ್ ಮಾಹಿತಿ ಲಭಿಸಿದ್ದು, ಈ ವೇಳೆ ಆತ ಮತ್ತೆರಡು ಮದುವೆ ಆಗಿರುವುದು ಬೆಳಕಿಗೆ ಬಂದಿದೆ. ಗಂಗನಾಥನ್‍ಗೆ ಮೊದಲ ಪತ್ನಿಯಿಂದ 10 ಮತ್ತು 9 ವರ್ಷದ ಪುತ್ರ ಹಾಗೂ ಪುತ್ರಿ ಇದ್ದು, 2ನೇ ಪತ್ನಿಗೆ ಶ್ರೀಧರನ್, 3ನೇ ಪತ್ನಿಗೆ ಗಿರಿಧರ್, 4ನೇ ಪತ್ನಿಗೆ ಒಬ್ಬ ಪುತ್ರ ಇರುವುದು ತಿಳಿದು ಬಂದಿದೆ. ಇದರೊಂದಿಗೆ ಆತ ಹೊಂದಿದ್ದ ನಕಲಿ ದಾಖಲೆಗಳು ಕೂಡ ಪತ್ತೆಯಾಗಿದ್ದು, ಸದ್ಯ ಪತಿಯ ಬಗ್ಗೆ ಕೋಮಲಾದೇವಿ ಇತರ ಮೂವರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಬಗ್ಗೆ ತನಿಖೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *