ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿಯೇ ಅವರು ಸಾರ್ವಜನಿಕ ವಲಯದಲ್ಲಿ ಕಳೆದ ಏಳೆಂಟು ತಿಂಗಳುಗಳಿಂದ ಕಾಣಿಸಿಕೊಂಡಿರಲಿಲ್ಲ. 72 ವರ್ಷದ ಮೆಗಾಸ್ಟಾರ್ ಮಮ್ಮುಟ್ಟಿ ಈಗಲೂ ಅಪಾರ ಅಭಿಮಾನಿಗಳನ್ನ ಹೊಂದಿರುವ ಬಹುಬೇಡಿಕೆಯ ನಟ. ಏಕಾಏಕಿ ಅನಾರೋಗ್ಯಕ್ಕೆ ತುತ್ತಾದ ನಟನ ಅಭಿಮಾನಿಗಳು ಕಂಗಾಲಾಗಿದ್ದರು. ಇದೀಗ ಮಮ್ಮುಟ್ಟಿ ಗುಣಮುಖರಾಗಿದ್ದು, ಶೀಘ್ರ ಬಣ್ಣದ ಲೋಕಕ್ಕೆ ಮರಳುವ ಸುದ್ದಿ ಬಂದಿದೆ.
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಮ್ಮುಟ್ಟಿ ಇದೀಗ ಕೊನೆಯ ಹಂತದ ಚಿಕಿತ್ಸಾ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ಇದೀಗ ಅವರು ತನ್ನೂರು, ತನ್ನ ಜನರ ಜೊತೆ ಬೆರೆಯಲು ವಾಪಸ್ಸಾಗಲಿದ್ದಾರಂತೆ. ಈ ಬಗ್ಗೆ ಮಮ್ಮುಟ್ಟಿ ಸಹೋದರ ಇಬ್ರಾಹಿಂ ಕುಟ್ಟಿ ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್ವೊಂದನ್ನ ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ಅವರು `ನನ್ನ ಸಹೋದರ ಮಮ್ಮುಟ್ಟಿ ಬಹುನಿರೀಕ್ಷಿತ ಪುನರಾಗಮನಕ್ಕಾಗಿ ಕಾತುರದಿಂದ ಕಾದಿದ್ದಾರೆ’ ಎಂದು ಸಂದೇಶ ಕೊಟ್ಟಿದ್ದಾರೆ. ಕಪ್ಪು ಮೋಡಗಳು ಹಾಗೂ ಪ್ರಕ್ಷುಬ್ಧ ಸಮುದ್ರವನ್ನ ದಾಟಿದ ಬಳಿಕ ಒಬ್ಬರು ಆನಂದಿಸುವ ನೆಮ್ಮದಿ ಭಾವನೆಯನ್ನು ನಾನು ಈಗ ಆನಂದಿಸುತ್ತಿದ್ದೇನೆ. ಆ್ಯಂಕ್ಸೈಟಿ, ಆತಂಕ ಕಡಿಮೆಯಾಗಿದೆ. ಇದೀಗ ಪುನರಾಗಮನದ ಸಮಯ ಎಂದಿದ್ದಾರೆ. ಅಪರಿಚಿತರು, ಹಿತೈಷಿಗಳು ನನ್ನ ಸಹೋದರನ ಆರೋಗ್ಯದ ಕುರಿತು ವಿಚಾರಿಸುತ್ತಿದ್ರಿ ಎಂದು ಮಮ್ಮುಟ್ಟಿ ಸಹೋದರ ಸಂದೇಶ ಕೊಡುವ ಮೂಲಕ ಮಮ್ಮುಟ್ಟಿ ಅನಾರೋಗ್ಯ ಪರೀಕ್ಷೆ ಮುಗಿದಿದೆ ಅನ್ನೋದನ್ನ ಬಹಿರಂಗಪಡಿಸಿದ್ದಾರೆ.
ಮಲಯಾಳಂ ಸೂಪರ್ ಸ್ಟಾರ್ ಪುನರಾಗಮನದ ಸಂದೇಶ ಬರುತ್ತಿದ್ದಂತೆ ಅವರ ಆಪ್ತಮಿತ್ರ ಮೋಹನ್‌ಲಾಲ್ ಫೋಟೋವೊಂದನ್ನ ಶೇರ್ ಮಾಡಿ ಸ್ವಾಗತ ಕೋರಿದ್ದಾರೆ. ಮಮ್ಮುಟ್ಟಿಗೆ ಮುತ್ತಿಡುವ ಚಿತ್ರದಲ್ಲಿನ ಭಾವನೆ ಎಲ್ಲವನ್ನೂ ಹೇಳುತ್ತಿದೆ. ಅನೇಕ ನಟ-ನಟಿಯರು ಮಮ್ಮುಟ್ಟಿಗೆ ವೆಲ್‌ಕಮ್ ಬ್ಯಾಕ್ ಎಂದು ಶುಭ ಕೋರಿದ್ದಾರೆ. ಇದೀಗ ಸಪ್ಟೆಂಬರ್ ತಿಂಗಳಲ್ಲೇ ಮಮ್ಮುಟ್ಟಿ ನಟನೆಗೆ ಮರಳುವ ಸಾಧ್ಯತೆ ಕೇಳಿಬರುತ್ತಿದ್ದು ಮಹೇಶ್ ನಾರಾಯಣನ್ ನಿರ್ದೇಶನದಲ್ಲಿ ಚಿತ್ರ ಈಗಾಗ್ಲೇ ಘೋಷಣೆಯಾಗಿತ್ತು. ಇದೇ ಚಿತ್ರಕ್ಕಾಗಿ ಮತ್ತೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಬಂದಿದೆ. ಒಟ್ಟಿನಲ್ಲಿ ಮಲಯಾಳಂ ಮೆಗಾಸ್ಟಾರ್ ವಾಪಸ್ಸಾಗ್ತಿರೋ ಸುದ್ದಿ ಮಲಯಾಳಂ ಇಂಡಸ್ಟ್ರಿಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.