ಕೊನೆಗೂ ಮಲ್ಯ ಖಾಸಗಿ ಐಷಾರಾಮಿ ವಿಮಾನ ಸೇಲ್ ಆಯ್ತು!

Public TV
1 Min Read

ಬೆಂಗಳೂರು: ದೇಶದ ಹಲವು ಬ್ಯಾಂಕ್‍ಗಳಲ್ಲಿ ಸಾಲಮಾಡಿ ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯರ ವಿಟಿ-ವಿಜೆಎಂ ನೋಂದಣಿ ಸಂಖ್ಯೆಯ ಐಷಾರಾಮಿ ಜೆಟ್ ಶುಕ್ರವಾರ ಮಾರಾಟವಾಗಿದೆ.

ಈ ಹಿಂದೆ ಮೂರು ಬಾರಿ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಲು ವಿಫಲವಾಗಿದ್ದ ಜೆಟ್ ಕೊನೆಗೂ ಮಾರಾಟವಾಗಿದ್ದು, ಅಮೆರಿಕದ ಮೂಲದ ಖಾಸಗಿ ಸಂಸ್ಥೆಯೊಂದು ಹರಾಜು ಪ್ರಕ್ರಿಯೆಯಲ್ಲಿ ಪಡೆದುಕೊಂಡಿದೆ. 100 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 6,84,45,00,000 ರೂ.) ಬೆಲೆಯ ಈ ವಿಮಾನ ಕೇವಲ 5.5 ಮಿಲಿಯನ್ ಡಾಲರ್(ಅಂದಾಜು 35 ಕೋಟಿ ರೂ.) ಗೆ ಮಾರಾಟವಾಗಿದೆ.

ಈ ಹಿಂದೆ ಮೂರು ಬಾರಿ ವಿಮಾನ ಮಾರಾಟಕ್ಕೆ ಬಿಡ್ ಕರೆಯಲಾಗಿತ್ತು. ಈ ವೇಳೆ ಯಾವುದೇ ಸಂಸ್ಥೆ ವಿಮಾನವನ್ನು ಖರೀದಿಸಲು ಆಸಕ್ತಿ ವಹಿಸಿರಲಿಲ್ಲ.

ಜೆಟ್ ವಿಶೇಷತೆ ಏನು?
ಅಂದಹಾಗೇ ಐಶಾರಾಮಿ ವಿಮಾನವು 100 ಮಿಲಿಯನ್ ಯುಎಸ್ ಡಾಲರ್ (ಅಂದಾಜು 6,84,45,00,000 ರೂ.) ಬೆಲೆ ಹೊಂದಿದ್ದರೂ ಕಳೆದ 5 ವರ್ಷಗಳಿಂದ ಜೆಟ್ ನಿರ್ವಹಣೆ ಮಾಡದ ಕಾರಣ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೆಟ್‍ನಲ್ಲಿ ಸುಮಾರು 25 ಪ್ರಯಾಣಿಕರು ಮತ್ತು 6 ಸಿಬ್ಬಂದಿಗಳು ಪ್ರಯಾಣಿಸಬಹುದಾಗಿದ್ದು, ಬೆಡ್ ರೂಮ್, ಬಾತ್ ರೂಮ್, ಬಾರ್, ಸಭಾಂಗಣ ಸೇರಿ ಇತರೇ ವ್ಯವಸ್ಥೆ ಒಳಗೊಂಡಿದೆ.

ಹರಾಜು ಮಾಡಿದ್ದು ಏಕೆ?
ಕಳೆದ ಐದು ವರ್ಷಗಳಿಂದ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಕ್ ಮಾಡಲಾಗಿದ್ದ ವಿಮಾನವನ್ನು ಮಾರಾಟ ಮಾಡಲು ಅನುಮತಿ ಕೋರಿ ಅಧಿಕಾರಿಗಳು ಮುಂಬೈ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಬಳಿಕ ನ್ಯಾಯಾಲಯ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿಸಲ್ಲಿಸಲು ಸಲಹೆ ನೀಡಿತ್ತು. ಕೋರ್ಟ್ ಸಲಹೆಯ ಮೇರೆಗೆ ಅಧಿಕಾರಿಗಳು ಮನವಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಅಧಿಕಾರಿಗಳು ಕಳೆದ ಹಲವು ವರ್ಷಗಳಿಂದ ವಿಮಾನ ನಿಲ್ದಾಣದಲ್ಲಿ ಪಾರ್ಕ್ ಮಾಡಿರುವುದರಿಂದ ಸ್ಥಳಾವಕಾಶ ಸಮಸ್ಯೆ ಉಂಟಾಗಿದ್ದು, ಪ್ರತಿ ಗಂಟೆಗೆ ಸಂಸ್ಥೆಗೆ 13,000 ರೂ. ನಿಂದ 15,000 ರೂ. ಗಳು ವ್ಯರ್ಥವಾಗುತ್ತಿದೆ ಎಂದು ಮನವರಿಕೆ ಮಾಡಿದ್ದರು. ಬಳಿಕ ನ್ಯಾಯಾಲಯ ಏಪ್ರಿಲ್ 2018 ರಲ್ಲಿ ಜೆಟ್ ವಿಮಾನದ ಹರಾಜಿಗೆ ಅನುಮತಿ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *