ಸಮ್ಮಿಶ್ರ ಸರ್ಕಾರದಲ್ಲಿ ಬೇಸರವಾದ್ರೆ ಹೈಕಮಾಂಡ್ ಗಮನಕ್ಕೆ ತನ್ನಿ – ನಾಯಕರಲ್ಲಿ ಖರ್ಗೆ ಮನವಿ

Public TV
2 Min Read

ಕಲಬುರಗಿ: ಹೈಕಮಾಂಡ್ ಸಮ್ಮಿಶ್ರ ಸರ್ಕಾರ ನಡೆಸಬೇಕು ಎಂಬ ತೀರ್ಮಾನವನ್ನು ತೆಗೆದುಕೊಂಡಿದೆ. ಮಧ್ಯಂತರ ಚುನಾವಣೆಯ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಊಹೆಗೆ ತಕ್ಕಂತೆ ಹೇಳಿಕೆಗಳನ್ನ ನೀಡಿಕೊಂಡು ಸಮ್ಮಿಶ್ರ ಸರ್ಕಾರದ ಬಲ ಬುಗ್ಗಿಸಬಾರದು. ಸಮ್ಮಿಶ್ರ ಸರ್ಕಾರದ ನಿರ್ಣಯಕ್ಕೆ ಬದ್ಧರಾಗಿ ನಡೆದುಕೊಳ್ಳಿ. ಒಂದು ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ಬೇಸರವಾದರೆ ಹೈ ಕಮಾಂಡ್ ಗಮನಕ್ಕೆ ತನ್ನಿ ಎಂದು ನಾಯಕರಲ್ಲಿ ಇದೇ ವೇಳೆ ಮನವಿ ಮಾಡಿಕೊಂಡರು.

ಒಂದು ವರ್ಷದ ಹಿಂದೆ ಅನೇಕ ಕಾರಣ ನೀಡಿ, ಸಮರ್ಥಿಸಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವೆ. ಹಾಗಾಗಿ ಸಮ್ಮಿಶ್ರ ಸರ್ಕಾರ ರಚನೆ ಬಲ ನೀಡಬೇಕು ಹೊರತು ಬಲ ಕುಗ್ಗಿಸಬಾರದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸರ್ಕಾರ ನಡೆಯಬೇಕು ಎನ್ನುವ ತೀರ್ಮಾನ ಕಾಂಗ್ರೆಸ್‍ನದ್ದೂ ಇದೆ. ಮಧ್ಯಂತರ ಚುನಾವಣೆ ಬಂದರೆ ಹೈ ಕಮಾಂಡ್ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದ ಅವರು, ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಗುರುಮಿಠಕಲ್‍ನಲ್ಲಿ ನಡೆದಂತಹ ಅಧಿಕಾರಿಗಳ ದರ್ಪವನ್ನು ಸಿಎಂ ಗಮನಕ್ಕೆ ತಂದಿದ್ದೇನೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಸಿಎಂಗೆ ಹೇಳಿದ್ದೇನೆ ಎಂದರು.

ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ನೀಡಿದರೆ ಖರ್ಗೆ ನಿಭಾಯಿಸುವ ವಿಚಾರದ ಕುರಿತು ಮಾತನಾಡಿದ ಅವರು, ಯಾವ ವಿಚಾರ ಅಸ್ತಿತ್ವದಲ್ಲಿದೆಯೋ ಆ ವಿಚಾರವನ್ನ ಮಾತನಾಡಬಾರದು. ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಅಸಹಕಾರ ಚಳುವಳಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ಇವಿಎಂ ಬಗ್ಗೆ ಎಲ್ಲರದ್ದು ಒಂದೇ ಅನಿಸಿಕೆ ಇದೆ. ಪ್ರಜಾಪ್ರಭುತ್ವ ತತ್ವದ ಮೇಲೆ ಚುನಾವಣೆ ನಡೆಸ್ತಾರೋ ಅವರು ಬ್ಯಾಲೆಟ್ ಪೇಪರ್ ಮೇಲೆ ಚುನಾವಣೆ ನಡೆಸುತ್ತಿದ್ದಾರೆ. ಬ್ಯಾಲೇಟ್ ಪೇಪರ್ ಮೇಲೆ ಚುನಾವಣೆ ನಡೆಸುವುದು ಒಳ್ಳೆಯದು. ಇವಿಎಂ ಯಂತ್ರದ ಚಿಪ್ ತಯಾರು ಮಾಡುವ ಜಪಾನ್ ದೇಶವೇ ಇವಿಎಂ ಉಪಯೋಗ ಮಾಡುತ್ತಿಲ್ಲ. ಮುಂದೆ ಎಲ್ಲ ಪಕ್ಷಗಳು ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ನೋಡೋಣ ಎಂದರು.

ರಾಹುಲ್ ಗಾಂಧಿಯೇ ಎಐಸಿಸಿ ಅಧ್ಯಕ್ಷರಾಗಿ ಇರಬೇಕು. ಬೇರೆಯವರು ಯಾರೇ ಬಂದರೂ ಪಕ್ಷ ಸಂಘಟನೆ ಮಾಡೋದು ಹಾಗೂ ಎಲ್ಲರನ್ನು ತೆಗೆದುಕೊಂಡು ಹೋಗೋದು ಕಷ್ಟ ಆಗುತ್ತದೆ. ರಾಹುಲ್ ಗಾಂಧಿಯೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂಬುದು ನಮ್ಮೆಲ್ಲರ ಆಸೆ ಆಗಿದೆ. ಅಷ್ಟೇ ಅಲ್ಲದೆ ದೇಶದ ಕಾಂಗ್ರೆಸ್ ಕಾರ್ಯಕರ್ತರ ಆಸೆಯು ಕೂಡ ಇದೇ ಆಗಿದೆ. ಹೀಗಾಗಿ ಅವರ ಮನವೊಲಿಸುವ ಪ್ರಯತ್ನ ಮುಂದುವರಿದಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *