ಕೋವಿಡ್ ಬಗ್ಗೆ ಏನಾದ್ರೂ ಮಾತನಾಡಿದ್ರೆ ತಪ್ಪಾಗುತ್ತದೆ: ಖರ್ಗೆ

Public TV
2 Min Read

ಕಲಬುರಗಿ: ಕೋವಿಡ್ ಇದೀಗ ಕಾಂಟ್ರವರ್ಸಿ ವಿಚಾರವಾಗಿದೆ. ಏನಾದರೂ ಮಾತಾಡಿದರೆ ತಪ್ಪಾಗುತ್ತದೆ. ಸಡನ್ ಆಗಿ ಲಾಕ್‌ಡೌನ್ ಮಾಡಿದರೆ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬಿಳಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಸೆಮಿ ಲಾಕ್‌ಡೌನ್ ಹಾಗೂ ವಿಕೆಂಡ್ ಕರ್ಫ್ಯೂಗೆ ಪರೋಕ್ಷವಾಗಿ ವಿರೋಧವನ್ನು ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಹಿಂದಿನ ಬಾರಿ ಸಡನ್ ಆಗಿ ಲಾಕ್‌ಡೌನ್ ಮಾಡಿದಾಗ ಸಾಕಷ್ಟು ತೊಂದರೆಯಾಗಿತ್ತು. ಜೊತೆಗೆ ಲಾಕ್‌ಡೌನ್‌ನಿಂದ ಬೀದಿಗೆ ಬಿದ್ದಿದ್ದ ಜನರಿಗೆ ಕೇಂದ್ರ ಸರ್ಕಾರ ಯಾವ ನೆರವನ್ನು ನೀಡಿರಲಿಲ್ಲ. ಕಾರ್ಮಿಕರ ನಿಧಿ ಹಣ ಕಾರ್ಮಿಕರಿಗೂ ಸಹ ನೀಡದೇ ಇರುವುದು ದುರಂತವಾಗಿದೆ. ಈಗಲೂ ಹೀಗೆ ಮಾಡಿದರೆ ದೇಶದ ರಾಜ್ಯದ ಆರ್ಥಿಕತೆಗೆ ದೊಡ್ಡ ಹೊಡೆತ ಬಿಳಲಿದೆ ಎಂದು ಹೇಳಿದರು.

ಈ ಹಿಂದೆ ಕೇಂದ್ರದ ಎಡಬಿಡಂಗಿ ನಿರ್ಧಾರಗಳಿಂದ ವಿಶ್ವದಲ್ಲಿ ದೇಶದ ಆರ್ಥಿಕ ಗುಣಮಟ್ಟ ಪಾತಾಳಕ್ಕೆ ಕುಸಿದಿತ್ತು. ಮತ್ತೊಮ್ಮೆ ಇದೇ ರೀತಿ ಆದರೆ ಬಡ, ಮಧ್ಯಮ ವರ್ಗದ ಜನರು ಎಲ್ಲವನ್ನು ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಲಾಕ್‌ಡೌನ್ ಮಾಡೋದು ಸರಿಯಲ್ಲ. ಎಲ್ಲದರ ಬಗ್ಗೆ ಚಿಂತನೆ ನಡೆಸಿ ಲಾಕ್‌ಡೌನ್ ಜಾರಿ ಮಾಡಬೇಕು. ಯಾವ ಯಾವ ವಲಯಗಳಿಗೆ ರಿಯಾಯಿತಿ ಕೊಡಬೇಕು ಎನ್ನುವುದನ್ನು ನಿರ್ಧರಿಸಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಕೋವಿಡ್-19 ಮುಂದಿನ ಎರಡು ವಾರ ನಿರ್ಣಾಯಕ – ಭಾರತಕ್ಕೆ WHO ತಜ್ಞರ ಎಚ್ಚರಿಕೆ

ಕೋವಿಡ್‌ನಿಂದ ಮೃತಪಟ್ಟವರ ಕುರಿತು ಕೇಂದ್ರ ಸರ್ಕಾರ ಬೋಗಸ್ ರಿಪೋರ್ಟ್ ನೀಡಿದೆ. ಕೋವಿಡ್ ವಿಚಾರವಾಗಿ ಕೇಂದ್ರ ಸರ್ಕಾರ ಸಿಂಪತಿ ಕ್ರಿಯೆಟ್ ಮಾಡಿ ಭರ್ಜರಿ ಪ್ರಚಾರ ಪಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಕೋವಿಡ್‌ನಿಂದ ಮೃತರಾದರೆ ಅವರನ್ನು ಸುಡಲು ಕಟ್ಟಿಗೆ ಸಿಗುತ್ತಿಲ್ಲ. ಹುಳೋಕೆ ಜಮೀನು ಸಿಗುತ್ತಿಲ್ಲ. ರಾಶಿ ರಾಶಿ ಹೆಣಗಳನ್ನು ಗಂಗಾ ನದಿಯಲ್ಲಿ ಬಿಸಾಕಿದ್ದು ಇದಕ್ಕೆ ಸಾಕ್ಷಿ ಎಂದ ಅವರು, ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ವಿಶೇಷ ಪ್ಯಾಕೇಜ್ ಘೋಷಿಸಿದ ನಂತರ ಲಾಕ್‌ಡೌನ್ ಮಾಡಿ ಏನಾದರು ಮಾಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ – ಕಾರ್ಯಕ್ರಮ ರದ್ದು

ಸಭೆ ಸಮಾರಂಭ ಹೋರಾಟಗಳಿಗೆ ಬ್ರೇಕ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆಯ ನೇತೃತ್ವವನ್ನು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಹಿಸಿದ್ದಾರೆ. ಸೆಮಿಲಾಕ್‌ಡೌನ್ ಹಾಗೂ ವೀಕೆಂಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾಡೋದು ಬಿಡುವುದು ರಾಜ್ಯ ಮುಖಂಡರು ನಿರ್ಧರಿಸುತ್ತಾರೆ. ಪಾದಯಾತ್ರೆಯಲ್ಲಿ ಮಾರ್ಪಾಡು ಮಾಡುವ ಬಗ್ಗೆ ಅವರನ್ನ ಕೇಳಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *