ಮೋದಿ ಜಪಾನ್‍ಗೆ ಹೋಗುವ ಮೊದಲು ನೋಟ್ ಬ್ಯಾನ್, ಜನರಿಗೆ ತೊಂದ್ರೆ: ಖರ್ಗೆ ಕಿಡಿ

Public TV
1 Min Read

ಬೆಂಗಳೂರು: ಪ್ರದಾನಿ ನರೇಂದ್ರ ಮೋದಿಯವರು ಜಪಾನ್‍ (Japan) ಗೆ ಹೋಗುವ ಮೋದಲು ನೋಟ್ ಬ್ಯಾನ್ (Note Ban) ಮಾಡಿಯೇ ಹೋಗುತ್ತಾರೆ. ಈ ಮೂಲಕ ಅವರು ಜನರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಾಗ್ದಾಳಿ ನಡೆಸಿದರು.

ಕಂಠೀರವ ಸ್ಟೇಡಿಯಂನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿಯವರು ಮತ್ತೊಂದು ಹೊಸ ಆರ್ಡರ್ ಶುರು ಮಾಡಿದ್ದಾರೆ. ಅವರು ಯಾವಾಗ ಯಾವಾಗ ಜಪಾನ್‍ಗೆ ಹೋಗುತ್ತಾರೋ ಆವಾಗ ನೋಟ್ ಬ್ಯಾನ್ ಮಾಡಿ ಹೋಗುತ್ತಾರೆ. ಕಳೆದ ಬಾರಿ ಜಪಾನ್ ಗೆ ಹೋಗುವಾಗ ಸಾವಿರ ರೂ. ನೋಟ್ ಬ್ಯಾನ್ ಮಾಡಿದ್ರು. ಈ ಬಾರಿ 2 ಸಾವಿರ ರೂ. ನೋಟುಗಳನ್ನು ಬ್ಯಾನ್ ಮಾಡಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ದೇಶದ ಜನತೆಗೆ ತೊಂದರೆ ಕೊಡುವ ಕೆಲಸವನ್ನು ಮೋದಿ (Narendra Modi) ಮಾಡುತ್ತಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ಒಬ್ಬರನ್ನು ನೋಡಿದರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ. ಆದರೆ ನಮ್ಮದು ಪ್ರೀತಿಯ ಸರ್ಕಾರ. ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕರೆದುಕೊಂಡು ಹೋಗುವಂತಹ ಸರ್ಕಾರವಾಗಿದೆ. ನುಡಿದಂತೆ ನಡೆಯುತ್ತೇವೆ. ನಾವು ಕೊಟ್ಟಿರುವ 5 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಖರ್ಗೆ ತಿಳಿಸಿದರು.

5 ಗ್ಯಾರಂಟಿ ಯೋಜನೆಗಳನ್ನು ಮೊದಲನೇ ಕ್ಯಾಬಿನೆಟ್ (Cabinet) ಸಭೆಯಲ್ಲಿಯೇ ಪಾಸ್ ಮಾಡಿ ಜನರಿಗೆ ಕೊಡುವ ಕೆಲಸ ಮಾಡುತ್ತೇವೆ. ಏನೇನು ಹೇಳಿದ್ದೇವೆಯೋ ಆ ಕೆಲಸವನ್ನು ಮಾಡುತ್ತೇವೆ. ಹಿಂದೆ ನಮ್ಮ ಸರ್ಕಾರ ಇದ್ದಾಗಲೂ ಹೇಳಿದ ಎಲ್ಲಾ ಕೆಸಗಳನ್ನು ಮಾಡಿ ತೋರಿಸಿದ್ದೇವೆ. ಬಿಜೆಪಿಯವರಂತೆ ನಾವು ಹೇಳೋದೊಂದು ಮಾಡೋದು ಇನ್ನೊಂದು ಅಂತ ಮಾಡಲ್ಲ. ಏನು ಹೇಳುತ್ತೇವೆಯೋ ಅದನ್ನು ಮಾಡಿ ತೋರಿಸುತ್ತೇವೆ ಎಂದು ಖಡಕ್ಕಾಗಿ ಹೇಳಿದರು.

Share This Article