ವೇತನದ ಹಣದಲ್ಲಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಕೊಡಿಸಿದ ಸಂಚಾರಿ ಪೊಲೀಸರು

Public TV
1 Min Read

ಬೆಂಗಳೂರು: ಇವತ್ತಿನ ಕಾಲದಲ್ಲಿ ಯಾರೂ ಕೂಡ 10 ರೂ. ಕೊಡುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಅಂತದ್ದರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಸಂಚಾರಿ ಪೊಲೀಸರು ವೇತನದ ಹಣವನ್ನು ಕೂಡಿಸಿ ಪರೋಪಕಾರಿ ಕೆಲಸ ಮಾಡಿದ್ದಾರೆ.

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಇನ್ಸ್‌ಪೆಕ್ಟರ್ ಅನಿಲ್ ನೇತೃತ್ವದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ಕೊಡಲಾಗಿದೆ. ನೆಲಮಂಗಲದ ಕೇತಮಾರನಹಳ್ಳಿಯ ಸರ್ಕಾರಿ ಶಾಲೆಯ ಸುಮಾರು 100 ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಿಸಲಾಗಿದೆ. ಇನ್ಸ್‍ಪೆಕ್ಟರ್ ಅನಿಲ್ ಅವರು ಮಕ್ಕಳಿಗೆ ಬ್ಯಾಗ್ ಕೊಡಲು ವಿಶೇಷ ರೀತಿಯಲ್ಲಿ ಹಣವನ್ನು ಸಂಗ್ರಹಿಸಿದ್ದಾರೆ.

ಅನಿಲ್ ಅವರು ತಮ್ಮನ್ನು ಸೇರಿದಂತೆ ಸಿಬ್ಬಂದಿಯ ವೇತನದಲ್ಲಿ ಇಂತಿಷ್ಟು ಅಂತ ಹಣವನ್ನು ಪಡೆದು ಸರ್ಕಾರಿ ಶಾಲೆಯ ಮಕ್ಕಳಿಗೆ ಬ್ಯಾಗ್ ವಿತರಿಸಿದ್ದಾರೆ. ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ವೇತನದಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಶಾಲಾ ಮಕ್ಕಳ ಬ್ಯಾಗ್‍ಗಾಗಿ ನೀಡಿದ್ದು, ಎಲ್ಲರಲ್ಲೂ ಮನಸ್ಸಿಗೆ ಸಮಾಧಾನ ಮತ್ತು ಧನ್ಯತಾ ಭಾವ ಮೂಡಿಸಿದೆ ಎಂದು ಇನ್ಸ್ ಪೆಕ್ಟರ್ ಅನಿಲ್ ಹೇಳಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಟಿ-ಶರ್ಟ್ ಗಿಫ್ಟ್:
ಮತ್ತೊಂದು ಬೆಳವಣಿಗೆಯಲ್ಲಿ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಅವರು ಟ್ರಾಫಿಕ್ ನಿಯಮಗಳನ್ನ ಪಾಲಿಸದವರಿಗೆ ಟಿ-ಶರ್ಟ್ ತೊಡಿಸಿದ್ದಾರೆ. ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಈ ಹಿಂದೆ ರೂಲ್ಸ್ ಬ್ರೇಕ್ ಮಾಡಿದವರಿಗೆ ರೋಸ್ ಕೊಟ್ಟು ಕಳಿಸಲಾಗುತ್ತಿತ್ತು. ಆದರೆ ಈ ಬಾರಿ ರೋಸ್ ಬೇಡ ಅಂತ ಟಿ-ಶರ್ಟ್ ಹಾಕಿಸಲಾಗಿದೆ. ಆದರೆ ಟೀ ಶರ್ಟ್ ಮೇಲೆ ‘ಐ ವಿಲ್ ಫಾಲೋ ಟ್ರಾಫಿಕ್ ರೂಲ್ಸ್’ ಎಂದು ಎರಡೂ ಬದಿಯಲ್ಲಿ ಬರೆಯಲಾಗಿದೆ.

ಸಂಚಾರ ನಿಯಮಗಳನ್ನ ಪಾಲಿಸದವರಿಗೆ ಈ ರೀತಿಯ ಟಿ ಶರ್ಟ್ ಧರಿಸಿ ಕಳಿಸಿದರೆ ಹತ್ತಾರು ಜನ ಬಟ್ಟೆಯ ಮೇಲಿರೊ ಸ್ಲೋಗನ್ ನೋಡುತ್ತಾರೆ. ಈ ಮೂಲಕವಾದರೂ ಒಂದಷ್ಟು ಮಂದಿ ಟ್ರಾಫಿಕ್ ನಿಯಮಗಳನ್ನ ಪಾಲಿಸುತ್ತಾರೆ. ಟಿ-ಶರ್ಟ್ ಧರಿಸಿದ ವ್ಯಕ್ತಿಗೂ ಕೂಡ ಇನ್ಮೇಲೆ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎನ್ನುವುದು ಮನಸ್ಸಿಗೆ ಬರುತ್ತದೆ. ರೋಸ್ ಕೊಡುವುದಕ್ಕಿಂತ ಇದೊಂದು ಉತ್ತಮ ಬೆಳವಣಿಗೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *