ಮಲೇಷ್ಯಾ ಪ್ರಧಾನಿ ರಾಜೀನಾಮೆ – ಭಾರತೀಯರ ಸಂಭ್ರಮಾಚರಣೆ

Public TV
2 Min Read

ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ ಮಲೇಷ್ಯಾ ಪ್ರಧಾನಿ 94 ವರ್ಷದ ಮಹತಿರ್ ಮೊಹಮ್ಮದ್ ಅವರು ಇಂದು ಮಧ್ಯಾಹ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತ್ತ ಮಹತೀರ್ ರಾಜೀನಾಮೆ ನೀಡುತ್ತಿದ್ದಂತೆ ಇತ್ತ ಭಾರತೀಯರು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ತಮ್ಮ ಪ್ರಧಾನಿ ಸ್ಥಾನಕ್ಕೆ ಮಾತ್ರವಲ್ಲದೆ ತಮ್ಮ ಪಕ್ಷಕ್ಕೂ ಕೂಡ ಮಹತಿರ್ ಅವರು ರಾಜೀನಾಮೆ ನೀಡಿದ್ದಾರೆ. ಮಧ್ಯಾಹ್ನ ಮಲೇಷ್ಯಾದ ರಾಜರಿಗೆ ಮಹತಿರ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜೀನಾಮೆ ನೀಡಿದರೂ ಪ್ರಧಾನಿ ಆಯ್ಕೆ ಆಗುವವರೆಗೆ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಹೊತ್ತುಕೊಂಡಿದ್ದ ನಜೀಬ್ ರಝಾಕ್ ಚುನಾವಣೆಯಲ್ಲಿ ಸೋತು 2018ರಲ್ಲಿ ಮಹತಿರ್ ಪ್ರಧಾನಿ ಪಟ್ಟ ಏರಿದ್ದರು. ಸರ್ಕಾರ ರಚಿಸಲು ಮಹತಿರ್ ಅವರಿಗೆ ‘ಪಕಟನ್ ಹರಪನ್’ ಪಕ್ಷದ ಮುಖ್ಯಸ್ಥ ಅನ್ವರ್ ಇಬ್ರಾಹಿಂ ಸಹಾಯ ಮಾಡಿದ್ದರು. ಈಗ ಮೈತ್ರಿ ಹಳಸಿದ್ದು ರಾಜೀನಾಮೆ ನೀಡಿದ್ದಾರೆ.

ಈ ಮಹತಿರ್, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ಹಿಂತೆಗೆದುಕೊಂಡ ನಂತರ ವಿಶ್ವಸಂಸ್ಥೆಯಲ್ಲಿ ಭಾರತದ ನಡೆಯನ್ನು ಟೀಕಿಸಿದ್ದರು. ಪೌರತ್ವ ತಿದ್ದುಪಡಿ ಕಾಯಿದೆಯನ್ನೂ ಅವರು ಟೀಕಿಸಿದ್ದರು. 70 ವರ್ಷಗಳಿಂದ ಜನರು ಯಾವುದೇ ಸಮಸ್ಯೆಯಿಲ್ಲದ ಪ್ರಜೆಗಳಾಗಿ ಒಟ್ಟಾಗಿ ವಾಸಿಸುತ್ತಿರುವಾಗ ಇದನ್ನು ತರುವ ಅವಶ್ಯಕತೆ ಏನಿತ್ತು? ಈ ಕಾನೂನಿನಿಂದ ಜನ ಸಾಯುತ್ತಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು.

https://twitter.com/AbhishekSR24/status/1231855395712335872

ವಿಶ್ವಸಂಸ್ಥೆಯ ನಿರ್ಣಯದ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ವಶ ಪಡಿಸಿಕೊಂಡಿದೆ ಎಂದು ಮಹತಿರ್ ದೂರಿದ್ದರು. ಭಾರತ ಪಾಕಿಸ್ತಾನ ಭಯೋತ್ಪಾದಕ ದೇಶ ಎಂದು ಕರೆಯುತ್ತಿದ್ದರೆ ಮಲೇಷ್ಯಾ ಪಾಕಿಸ್ತಾನದ ಆಪ್ತ ಸ್ನೇಹಿತನಾಗಿತ್ತು.

ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಮಾತನಾಡಿದ್ದಕ್ಕೆ ಸಿಟ್ಟಾದ ಭಾರತ ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು. ಆಮದು ನಿಲ್ಲಿಸಿದ್ದು ಮಲೇಷ್ಯಾಕ್ಕೆ ಭಾರೀ ಹೊಡೆತ ನೀಡಿತ್ತು. ವ್ಯಾಪಾರ ನಿಲ್ಲಿಸುವುದು ಯುದ್ಧಕ್ಕೆ ಸಮ. ಭಾರತದ ನಡೆ ಸರಿಯಲ್ಲ ಎಂದು ಮಹತಿರ್ ಟೀಕಿಸಿದ್ದರು.

ಒಂದು ಕಡೆ ಕೊರೊನಾ ವೈರಸ್ ನಿಂದಾಗಿ ಚೀನಾ ಆಮದು ಕಡಿಮೆ ಮಾಡಿಕೊಂಡಿದ್ದರೆ ಇತ್ತ ಭಾರತ ವ್ಯಾಪಾರ ಸಮರ ಆರಂಭಿಸಿದ ತಾಳೆ ಎಣ್ಣೆ ದರ ಭಾರೀ ಕುಸಿತ ಕಂಡಿತ್ತು. ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರುತ್ತಿರುವ ಬೆನ್ನಲ್ಲೇ ಪ್ರಧಾನಿ ಮಹತಿರ್ ಈಗ ರಾಜೀನಾಮೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *