ಕೊಡಗಿನ ಸಾರ್ವಜನಿಕ ಆರೋಗ್ಯ ಕೇಂದ್ರದ ನಾಮಫಲಕಗಳು ಮಲಯಾಳಿಮಯ

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದ ಸಾರ್ವಜನಿಕ ಆರೋಗ್ಯ ಕೇಂದ್ರ ಮಲಯಾಳಿಮಯವಾಗಿದೆ.

ಕನ್ನಡ ನಾಡಿನಲ್ಲಿ ಎಲ್ಲಾ ನಾಮಫಲಕಗಳು ಕನ್ನಡದಲ್ಲಿರಬೇಕು. ಅದರಲ್ಲೂ ಸರ್ಕಾರಿ ಕಚೇರಿಯ ಎಲ್ಲಾ ವ್ಯವಹಾರ ಕನ್ನಡದಲ್ಲಿ ಇರಬೇಕು ಎನ್ನುವ ಸರ್ಕಾರಿ ಆದೇಶ ಇದೆ. ಆದರೆ ಕುಟ್ಟ ಆಸ್ಪತ್ರೆಯಲ್ಲಿ ಎಲ್ಲಾ ನಾಮಫಲಕಗಳನ್ನು ಕನ್ನಡದಿಂದ ಮಲಯಾಳಂ ಭಾಷೆಗೆ ಬದಲಾಯಿಸಲಾಗಿದೆ.

ಒಂದು ಮೂಲದ ಪ್ರಕಾರ, ಚಲನಚಿತ್ರ ಅಥವಾ ಟಿವಿ ಧಾರಾವಾಹಿಗೆ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಇನ್ನೊಂದೆಡೆ ಸರ್ಕಾರಿ ಆಸ್ಪತ್ರೆಯನ್ನು ಕೇರಳದವರಿಗೆ ಮಾರಾಟ ಮಾಡಲಾಗಿದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಕುರುಕ್ಕನ್ ಮೂಲ ಮಿಷಿನ್ ಹಾಸ್ಪಿಟಲ್(ಕೆಎಂಎಚ್) ಎಂದು ಪ್ರವೇಶ ದ್ವಾರದಲ್ಲಿ ದೊಡ್ಡ ನಾಮಫಲಕವನ್ನು ಅಳವಡಿಸಲಾಗಿದೆ. ಆಸ್ಪತ್ರೆಯ ಒಳಭಾಗದಲ್ಲಿ ಮಲಯಾಳಂ ಭಾಷೆಯ ಫಲಕಗಳು ಅಳವಡಿಸಲಾಗಿದೆ.

ಮಲಯಾಳಂ ಭಾಷೆಯ ಚಲನಚಿತ್ರ ಅಥವಾ ಧಾರಾವಾಹಿ ಚಿತ್ರೀಕರಣ ಮಾಡಲು ಅವಕಾಶ ನೀಡಿದರೆ ಕರ್ನಾಟಕ ಸರ್ಕಾರದ ಆಸ್ಪತ್ರೆಯ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು. ಆಸ್ಪತ್ರೆಯಲ್ಲಿ ಚಿತ್ರೀಕರಣಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ ಸರ್ಕಾರಿ ಆಸ್ತಿಯ ರಕ್ಷಣೆ ಸರ್ಕಾರಿ ಅಧಿಕಾರಿಗಳ ಜವಾಬ್ದಾರಿ, ಅದರಂತೆ ಸರ್ಕಾರಿ ಕಟ್ಟಡಗಳ ನಾಮಫಲಕಗಳು ಕನ್ನಡದಲ್ಲಿ ಇರಬೇಕು ಮತ್ತು ಅದನ್ನು ರಕ್ಷಿಸಬೇಕಾದದ್ದು ಅಧಿಕಾರಿಗಳ ಕರ್ತವ್ಯ. ನಾಮಫಲಕಗಳನ್ನು ಕೂಡಲೇ ಸರಿಪಡಿಸಿ ಹಿಂದಿನಂತೆ ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *