ಮತ್ತೆ ಸ್ವದೇಶಿ ಎಂಜಿನ್‍ಲೆಸ್ ಟಿ-18 ರೈಲಿನ ಮೇಲೆ ಕಲ್ಲೆಸೆತ!

Public TV
2 Min Read

ನವದೆಹಲಿ: ಮೇಕ್ ಇನ್ ಇಂಡಿಯಾದ ಅಡಿ ಅಭಿವೃದ್ಧಿ ಪಡಿಸಲಾದ ಟ್ರೈನ್-18(ವಂದೇ ಭಾರತ್) ಪರೀಕ್ಷಾರ್ಥ ಸಂಚಾರದ ವೇಳೆ ದುಷ್ಕರ್ಮಿಗಳು ಮತ್ತೆ ಕಲ್ಲನ್ನು ಎಸೆದಿದ್ದಾರೆ.

ಅಲಹಬಾದ್ ಪರೀಕ್ಷಾರ್ಥ ಓಡಾಟಕ್ಕಾಗಿ ಶಾಕೂರ್ ಬಸ್ತಿಯಿಂದ ದೆಹಲಿಗೆ ರೈಲು ಆಗಮಿಸುತ್ತಿದ್ದಾಗ ದೆಹಲಿಯ ಲಹೋರಿ ಗೇಟ್ ಬಳಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಎರಡನೇ ಬೋಗಿಗೆ ಕಲ್ಲು ಎಸೆದ ಪರಿಣಾಮ ಕಿಟಕಿಯ ಗ್ಲಾಸ್ ಒಡೆದು ಹೋಗಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಳ್ಳದ ಕಾರಣ ದೂರು ದಾಖಲಿಸಿಕೊಂಡಿಲ್ಲ. ಕಳೆದ ವರ್ಷ ದೆಹಲಿ ಮತ್ತು ಆಗ್ರಾ ನಡುವಿನ ಪರೀಕ್ಷಾರ್ಥ ಓಡಾಟದ ಸಮಯದಲ್ಲೂ ಕಲ್ಲು ತೂರಾಟ ನಡೆದಿತ್ತು.

ಈ ಬಾರಿಯ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಭಾರತದ ಪ್ರಯಾಣಿಕರಿಗೆ ವಿಶ್ವದರ್ಜೆ ಗುಣಮಟ್ಟದ ರೈಲಿನ ಅನುಭವ ನೀಡಲು ಟ್ರೈನ್ -18 ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದ್ದರು.

ಸದ್ಯ ವೇಗವಾಗಿ ಸಂಚರಿಸುತ್ತಿರುವ ಶತಾಬ್ದಿ ಎಕ್ಸ್ ಪ್ರೆಸ್ ರೈಲಿಗೆ ಪರ್ಯಾಯವಾಗಿ ಈಗಿರುವ ಹಳಿಗಳಲ್ಲೇ ಈ ರೈಲು ಸೇವೆಯನ್ನು ಆರಂಭಿಸಲು ರೈಲ್ವೇ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. 2018ರ ಅಕ್ಟೋಬರ್ 29ರಂದು ಹಸಿರು ನಿಶಾನೆ ತೋರಿಸಲಾಗಿದ್ದ ಈ ರೈಲು ಗಂಟೆಗೆ 200 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ದೇಶದಲ್ಲಿ 60 ಸಾವಿರ ಕಿ.ಮೀ ಉದ್ದದ ರೈಲ್ವೇ ಹಳಿಯಿದ್ದು, ಇದರಲ್ಲಿ ಶೇ. 0.3 ಹಳಿಗಳಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ರೈಲನ್ನು ಓಡಿಸಬಹುದು ಎಂದು ವರದಿಯೊಂದು ತಿಳಿಸಿದೆ.

ರೈಲಿನ ವಿಶೇಷತೆ ಏನು?
ಭಾರತೀಯ ರೈಲ್ವೇ ವ್ಯವಸ್ಥೆ ಹಳೆ ಕಾಲದ್ದು ಎನ್ನುವ ಟೀಕೆಗೆ ಉತ್ತರ ಎನ್ನುವಂತೆ ಚೆನ್ನೈ ಮೂಲದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್) ಟಿ-18 ರೈಲನ್ನು ಅಭಿವೃದ್ಧಿ ಪಡಿಸಿದೆ. ವಿದೇಶಿ ರೈಲುಗಳಲ್ಲಿ ಇರುವಂತೆ ಇದು ಸಂಪೂರ್ಣ ಹವಾ ನಿಯಂತ್ರಣ ಹಾಗೂ ಸಿಸಿಟಿವಿ ವ್ಯವಸ್ಥೆ ಹೊಂದಿದೆ. ರೈಲಿನಲ್ಲಿ 78 ಆಸನಗಳ ಸಾಮಾನ್ಯ ಬೋಗಿಗಳಿದ್ದರೆ, ಮಧ್ಯದಲ್ಲಿ ತಲಾ 52 ಆಸನಗಳ ಎರಡು ಎಕ್ಸಿಕ್ಯುಟಿವ್ ಬೋಗಿಯನ್ನು ನೀಡಲಾಗಿದೆ. ಇದನ್ನೂ ಓದಿ: ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!

2018 ರಲ್ಲಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಈ ರೈಲುಗಳಿಗೆ `ಟ್ರೈನ್ 18? ಎಂದು ಹೆಸರಿಡಲಾಗಿದ್ದು ಈಗಿನ ರೈಲುಗಳಂತೆ ಪ್ರತ್ಯೇಕ ಎಂಜಿನ್ ಹೊಂದಿರುವುದಿಲ್ಲ. ಬದಲಿಗೆ ಮೆಟ್ರೋ ರೈಲುಗಳಂತೆ ವಿದ್ಯುತ್ ಶಕ್ತಿ ಪ್ರತಿ ಚಕ್ರಕ್ಕೂ ಮೋಟಾರುಗಳ (ಟ್ರಾಕ್ಷನ್ ಮೋಟಾರ್) ಮೂಲಕ ವರ್ಗಾವಣೆಯಾಗುತ್ತದೆ. ಇದನ್ನು ವಿಮಾನದಲ್ಲಿರುವಂತೆ ಕಾಕ್‍ಪಿಟ್‍ನಲ್ಲಿ ನಿಯಂತ್ರಿಸಲಾಗುತ್ತದೆ. ಇದರಿಂದಾಗಿ ವೇಗದಲ್ಲಿ ರೈಲು ಸಂಚರಿಸುತ್ತದೆ.

ಅಲ್ಯುಮೀನಿಯಂ ಬಾಡಿ ಇರುವ ಕಾರಣ ಕಡಿಮೆ ಭಾರ ಹೊಂದಿದ್ದರಿಂದ ಹೆಚ್ಚಿನ ವೇಗದಲ್ಲಿ ಹೋಗುತ್ತದೆ. ಇದು ಸೆಮಿ ಹೈ ಸ್ಪೀಡ್ ರೈಲಾಗಿರುವ ಕಾರಣ ಗಂಟೆಗೆ 220 ಕಿ.ಮೀ. ವೇಗದವರೆಗೆ ಸಂಚರಿಸುವ ಸಾಮರ್ಥ್ಯವನ್ನು ಪಡೆದಿದೆ. ವಿದೇಶದ ರೈಲುಗಳಲ್ಲಿರುವಂತೆ ವೈಫೈ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ತಿರುಗಿಸಬಹುದಾದ ಸೀಟುಗಳು, ಚಾರ್ಜರ್ ವ್ಯವಸ್ಥೆ ವೃದ್ಧರಿಗೆ, ಅಂಗವಿಕಲರಿಗೆ ಅನುಕೂಲವಾಗುವಂತೆ ಮಡಚುವ ಮೆಟ್ಟಿಲುಗಳು ಈ ರೈಲಿನಲ್ಲಿದೆ.

 

Share This Article
Leave a Comment

Leave a Reply

Your email address will not be published. Required fields are marked *