ಮಸೂದೆ ಬದಲಾಯಿಸಿ, ಸಮಸ್ಯೆ ಬಗೆಹರಿಸಿ- ಸಿಎಂಗೆ ಹೆಚ್‍ಡಿಕೆ ಮನವಿ

Public TV
1 Min Read

ಬೆಂಗಳೂರು: ಸುಮಾರು 36 ಮಂದಿ ಅಮಾಯಕ ರೋಗಿಗಳನ್ನು ಬಲಿ ಪಡೆದ ಖಾಸಗಿ ವೈದ್ಯರ ಮುಷ್ಕರ ಐದನೇ ದಿನವೂ ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ.

ದೂರವಾಣಿ ಮೂಲಕ ಸಿಎಂ ಹಾಗೂ ಕಾನೂನು ಸಚಿವ ಟಿಬಿ ಜಯಚಂದ್ರ ಜೊತೆ ಮಾತನಾಡಿದ ಹೆಚ್‍ಡಿಕೆ, ವೈದ್ಯರ ಸಮಸ್ಯೆಯನ್ನು ನಾಜೂಕಾಗಿ ಪರಿಹರಿಸುವಂತೆ ಸಲಹೆ ನೀಡಿದ್ರು. ರಾಜ್ಯಾದ್ಯಂತ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಸ್ಯೆಯನ್ನು ಆದಷ್ಟು ಬೇಗ ಮಾತುಕತೆ ಮೂಲಕ ಬಗೆಹರಿಸಿ. ವಿಧೇಯಕದಲ್ಲಿ ಒಂದಷ್ಟು ಬದಲಾವಣೆ ಮಾಡಿ. ವೈದ್ಯರು ಸ್ಥಳೀಯ ಪ್ರಾಧಿಕಾರದ ಮುಂದೆ ಹೋಗಿ ಕೈ ಕಟ್ಟಿ ನಿಲ್ಲುವಂತಾಗುವುದು ಸರಿಯಲ್ಲ ಅಂತ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನಸಾಮಾನ್ಯರಿಗೆ ಅನುಕೂಲವಾಗುವ ಅಂಶಗಳಿರಲಿ. ಆದ್ರೆ ವೈದ್ಯರಿಗೆ ಮುಜುಗರ ಆಗುವಂತ ಅಂಶಗಳನ್ನು ಕೈ ಬಿಡುವುದು ಉತ್ತಮ. ಆರೋಗ್ಯ ಸಚಿವರೊಂದಿಗೆ ಮಾತನಾಡಿ ಇವತ್ತೇ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿ. ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಎಲ್ಲವೂ ಸರಿಯಾಗತ್ತೆ ಅಂತ ಹೆಚ್‍ಡಿಕೆ ಹೇಳಿದ್ದಾರೆ. ಸದ್ಯ ಕುಮಾರಸ್ವಾಮಿ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಭಾರತೀಯ ವೈದ್ಯಕೀಯ ಸಂಘ ಯಾವುದೇ ಆಸ್ಪತ್ರೆಗಳ ಬಂದ್‍ಗೆ ಕರೆ ನೀಡಿಲ್ಲ. ಬೆಂಗಳೂರಿನ ವೈದ್ಯರಷ್ಟೇ ಕರೆ ನೀಡಿದ್ರು ಅಂತಾ ಐಎಂಎ ರಾಜ್ಯಾಧ್ಯಕ್ಷ ಡಾ. ಹೆಚ್‍ಎಸ್ ರವೀಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಕರೆ ನೀಡಿದ್ದ ಬಂದ್ ವಾಪಸ್ ಪಡೆದಿದ್ದಾರೆ. ನಾನು ಅಮರಣಾಂತ ಉಪವಾಸ ಮಾಡುತ್ತಿದ್ದೇನೆ. ಯಾವುದೇ ಬಂದ್ ಗೆ ಕರೆ ನೀಡಿಲ್ಲ. ಮಧ್ಯಾಹ್ನ 2 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಒಮ್ಮತದ ನಿರ್ಧಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿದೆ. ಮಧ್ಯಾಹ್ನದ ಬಳಿಕ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಅಂತಾ ರವೀಂದ್ರ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *