ಬೆಂಗಳೂರು ಸ್ಫೋಟದ ಸೂತ್ರಧಾರಿ ಅರೆಸ್ಟ್‌ – ಶಂಕಿತರ ಮನೆಯಲ್ಲಿ ಭಾರೀ ಪ್ರಮಾಣದ ದೇಶ ವಿನಾಶಕಾರಿ ವಸ್ತುಗಳು ಪತ್ತೆ

Public TV
3 Min Read

* ದೇಶದ ಪ್ರಮುಖ ನಗರಗಳ ನಕ್ಷೆ, 20 ಕೆಜಿಯ ಸೂಟ್‌ಕೇಸ್ ಬಾಂಬ್
* ಕೋಡಿಂಗ್ ಬುಕ್ಸ್‌, ಹ್ಯಾಕಿಂಗ್ ಸಾಫ್ಟ್‌ವೇರ್, ಐಇಡಿ ಸ್ಫೋಟಕ ವಸ್ತುಗಳು ಪತ್ತೆ

ಅಮರಾವತಿ (ಕಡಪ): ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪೊಲೀಸರು (Annamayya Police) ಭಯೋತ್ಪಾದಕ ಚಟುವಟಿಕೆಗಳ (Terror Activities) ವಿರುದ್ಧ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಇತ್ತೀಚೆಗಷ್ಟೇ ಬಂಧಿಸಿದ ಇಬ್ಬರು ಶಂಕಿತ ಭಯೋತ್ಪಾದಕರ ಮನೆಗಳ ಮೇಲೆ ದಾಳಿ ನಡೆಸಿ ಸ್ಫೋಟಕ, ಐಇಡಿ (IEDs) ಸೇರಿದಂತೆ ಹಲವು ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.

ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಉಮ್ಮಾ ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಈಬ್ಬರು ಶಂಕಿತ ಭಯೋತ್ಪಾದಕರನ್ನ ರಾಯಚೋಟಿ ಪಟ್ಟಣದಲ್ಲಿ ಬಂಧಿಸಲಾಗಿತ್ತು. ಬೆಂಗಳೂರು ನಗರ ಸೇರಿ ದಕ್ಷಿಣ ಭಾರತದ ಹಲವು ಬಾಂಬ್ ಸ್ಫೋಟ (Bengaluru Blast) ಪ್ರಕರಣದಲ್ಲಿ ಇವರ ಕೈವಾಡವಿತ್ತು ಎನ್ನಲಾಗಿದೆ. ಇದನ್ನೂ ಓದಿ: 30 ವರ್ಷದಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಸ್ಫೋಟದ ಉಗ್ರ ಬಂಧನ

mastermind behind Bengaluru Blast and south india bombing abubakar siddique arrested

ಶೋಧದ ಸಮಯದಲ್ಲಿ ಶಂಕಿತ ಉಗ್ರ ಅಬೂಬಕರ್ ಪತ್ನಿ ಸಾಯಿರಾ ಬಾನು, ಮೊಹಮ್ಮದ್ ಅಲಿ ಪತ್ನಿ ಶೇಖ್ ಶಮೀಮ್ ದಾಳಿ ತಡೆಯಲು ಯತ್ನಿಸಿದ್ದಾರಲ್ಲದೇ ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳೀಯ ಮಹಿಳೆಯರನ್ನೇ ಮದ್ವೆಯಾಗಿದ್ದ ಅಬೂಬಕರ್‌ ಹಾಗೂ ಅಲಿ ಕಳೆದ 20 ವರ್ಷಗಳಿಂದ ನಕಲಿ ದಾಖಲೆಗಳನ್ನಿಟ್ಟುಕೊಂಡೇ ವಾಸಿಸುತ್ತಿದ್ದರು. ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ಕಡಪ ಕೇಂದ್ರ ಜೈಲಿಗೆ ಕಳಿಸಿದ್ದಾರೆ. ಭಯೋತ್ಪಾದನಾ ಸಂಚಿನಲ್ಲಿ ಅವರ ಸಂಭಾವ್ಯ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಈ ಕುರಿತು ಅನ್ನಮಯ್ಯ ಜಿಲ್ಲಾ ಎಸ್ಪಿ ವಿ. ವಿದ್ಯಾ ಸಾಗರ್ ನಾಯ್ಡು ಅವರೊಟ್ಟಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನೂಲ್ ರೇಂಜ್ ಡಿಐಜಿ ಡಾ. ಕೋಯ ಪ್ರವೀಣ್, ಅಬೂಬಕರ್ ಸಿದ್ದಿಕ್ ಅಲಿಯಾಸ್ ಅಮಾನುಲ್ಲಾ ಮತ್ತು ಮೊಹಮ್ಮದ್ ಅಲಿ ಅಲಿಯಾಸ್ ಮನ್ಸೂರ್ ಎಂಬ ಇಬ್ಬರು ವ್ಯಕ್ತಿಗಳು ಕಳೆದ 20 ವರ್ಷಗಳಿಂದ ರಾಯಚೋಟಿಯಲ್ಲಿ ನಕಲಿ ದಾಖಲೆಗಳನ್ನ ಪಡೆದು ವಾಸಿಸುತ್ತಿದ್ದರು. ಸ್ಥಳೀಯ ಮಹಿಳೆಯರನ್ನೇ ಮದ್ವೆಯಾಗಿದ್ದ ಇವರು, ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Tamil Nadu Custodial Death | ಕೊಲೆಗಾರರು ಹೀಗೆ ದಾಳಿ ಮಾಡಲ್ಲ – ಹೈಕೋರ್ಟ್‌ ಛೀಮಾರಿ; ಐವರು ಪೊಲೀಸರು ಅರೆಸ್ಟ್‌

mastermind behind Bengaluru Blast and south india bombing abubakar siddique arrested 1

ಆರೋಪಿಗಳ ವಿರುದ್ಧ ರಾಯಚೋಟಿ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 132, ಸ್ಫೋಟಕ ಕಾಯ್ದೆ (1908 & 1884), ಯುಎಪಿಎ ಕಾಯ್ದೆ (ಸೆಕ್ಷನ್ 13,15,18), ಶಸ್ತ್ರಾಸ್ತ್ರ ಕಾಯ್ದೆ ಮತ್ತು ಯುಎಪಿಎ ಮತ್ತು ಸ್ಫೋಟಕ ಕಾಯ್ದೆಗಳ ಅಡಿಯಲ್ಲಿ ಹೆಚ್ಚುವರಿ ಆರೋಪಗಳಿಗಾಗಿ 2 ಪ್ರಕರಣ ದಾಖಲಿಸಲಾಗಿದೆ. ಇನ್ನೂ ದಾಳಿ ವೇಳೆ ಪತ್ತೆಯಾದ ಅಮೋನಿಯಂ ನೈಟ್ರೇಟ್‌ (ಸುಧಾರಿತ ಸ್ಫೋಟಕ ಸಾಧನಕ್ಕೆ ಬಳಸುವ ಪೌಡರ್)‌, ಸ್ಲರಿ ಸ್ಫೋಟಕಗಳು (ನೈಟ್ರೋಗ್ಲಿಸರಿನ್ ಅಥವಾ ಟಿಎನ್‌ಟಿ ಎಂದು ಶಂಕಿಸಲಾದ ಲಿಕ್ವಿಡ್‌), ಪಿಇಟಿಎನ್ ತುಂಬಿದ 20 ಕೆಜಿ ತೂಕದ ಸೂಟ್‌ಕೇಸ್ ಬಾಂಬ್, ಮತ್ತೊಂದು ಸೂಟ್‌ಕೇಸ್ ಮತ್ತು ಐಇಡಿಗಳೆಂದು ಶಂಕಿಸಲಾದ ಪೆಟ್ಟಿಗೆ, ಪೊಟ್ಯಾಸಿಯಮ್ ನೈಟ್ರೇಟ್, ಕ್ಲೋರೇಟ್, ಪರ್ಮಾಂಗನೇಟ್, ಗನ್‌ಪೌಡರ್, ಕಠಾರಿಗಳು, ಕ್ಲೀವರ್‌ಗಳು ಮತ್ತು ಇತರ ಹರಿತವಾದ ಆಯುಧಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ವಿನಾಶ ಉಂಟುಮಾಡುವ ಸಾಮರ್ಥ್ಯವಿರುವ ಅಪಾಯಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೇ ಟೈಮರ್‌ಗಳು, ಪುಲ್ ಸ್ವಿಚ್‌ಗಳು, ಪ್ರೆಶರ್ ಸ್ವಿಚ್‌ಗಳು, ಸ್ಪೀಡ್ ಕಂಟ್ರೋಲರ್‌, ಗ್ಯಾಸ್ ಟ್ಯೂಬ್ ಅರೆಸ್ಟರ್‌, ಬಾಲ್ ಬೇರಿಂಗ್‌, ನಟ್‌ಗಳು ಮತ್ತು ಬೋಲ್ಟ್‌ಗಳು, ಬೈನಾಕ್ಯುಲರ್‌ಗಳು, ವಾಕಿ-ಟಾಕಿಗಳು, ರೇಡಿಯೋ ಉಪಕರಣಗಳು, ಮೊಬೈಲ್ ಫೋನ್‌ಗಳು ಮತ್ತು ಚೆಕ್‌ಬುಕ್‌ಗಳು, ಡಿಜಿಟಲ್ ಸಾಧನಗಳು ಹಾಗೂ ಭಾರತದ ಪ್ರಮುಖ ನಗರಗಳ ನಕ್ಷೆಗಳು, ಟೈಮಿಂಗ್ ಸರ್ಕ್ಯೂಟ್ ಕೈಪಿಡಿಗಳು, ಕೋಡಿಂಗ್ ಬುಕ್ಸ್‌, ಹ್ಯಾಕಿಂಗ್ ಸಾಫ್ಟ್‌ವೇರ್, ಆಸ್ತಿ ಮತ್ತು ಪ್ರಯಾಣ ದಾಖಲೆಗಳು ಹಾಗೂ ಪ್ರಚೋಧನಾಕಾರಿ ಭಾಷಣಗಳನ್ನು ಒಳಗೊಂಡ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ | ಭಾರೀ ಮಳೆಗೆ 37 ಮಂದಿ ಸಾವು – 400 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹಾನಿ

ಆರೋಪಿಗಳಿಬ್ಬರೂ ಕ್ರಿಮಿನಲ್‌ ಹಿನ್ನೆಲೆ ಉಳ್ಳವರು
ಇನ್ನೂ ಅಬೂಬಕರ್‌ ಸಿದ್ದಿಕ್‌ ಹಾಗೂ ಅಲಿ ಈಗಾಗಲೇ ಕ್ರಿಮಿನಲ್‌ ಹಿನ್ನೆಲೆಯುಳ್ಳ ಆರೋಪಿಗಳೆಂದು ತಿಳಿದುಬಂದಿದೆ. ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಸಿದ್ದಿಕ್ ಆರೋಪಿಯಾಗಿದ್ದಾನೆ. 1999ರ ಬೆಂಗಳೂರು ಸ್ಫೋಟ, 2013ರ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಸ್ಫೋಟ, 2011ರಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ನೇತೃತ್ವದ ರಥಯಾತ್ರೆಯ ಮೇಲೆ ಮಧುರೈಯಲ್ಲಿ ನಡೆದ ಪೈಪ್ ಬಾಂಬ್ ದಾಳಿ, 1991ರ ಚೆನ್ನೈ ಹಿಂದೂ ಮುನ್ನಣಿ ಕಾರ್ಯಾಲಯದ ಮೇಲೆ ನಡೆದ ದಾಳಿಯಲ್ಲೂ ಈತ ಆರೋಪಿಯಾಗಿದ್ದ.

ಅಲ್ಲದೆ, ನಾಗೂರಿನಲ್ಲಿ ಪಾರ್ಸೆಲ್ ಬಾಂಬ್ ಸ್ಫೋಟ, 1997ರಲ್ಲಿ ಚೆನ್ನೈ, ತಿರುಚಿರಾಪಳ್ಳಿ, ಕೊಯಮತ್ತೂರು ಸೇರಿ 7 ಕಡೆ ನಡೆದ ಸ್ಫೋಟ, ಚೆನ್ನೈ ಎಗ್ಮೋರ್ ಪೊಲೀಸ್ ಕಮೀಷನರ್ ಕಚೇರಿ ಸ್ಫೋಟ, 2012ರ ವೆಲ್ಲೂರು ಅರವಿಂದ ರೆಡ್ಡಿ ಕೊಲೆ ಪ್ರಕರಣದಲ್ಲೂ ಈತನೇ ಸೂತ್ರಧಾರನಾಗಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕೊರಿಯರ್‌ ಕೊಡುವ ನೆಪದಲ್ಲಿ ಬಂದು ಟೆಕ್ಕಿ ಮೇಲೆ ಅತ್ಯಾಚಾರ – ಮುಖಕ್ಕೆ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿ ಕುಕೃತ್ಯ

Share This Article