ಮಂಗಳೂರು ಡಿಸಿಸಿ ಬ್ಯಾಂಕ್‌ಗೆ ಆರ್‌ಬಿಐ ಶಾಕ್‌ – 5 ಲಕ್ಷ ರೂ. ದಂಡ, ಕಾನೂನು ಕ್ರಮದ ಎಚ್ಚರಿಕೆ

Public TV
2 Min Read

– ಸಾಲಗಳ ಹೆಸರಿನಲ್ಲಿ ಭಾರೀ ಅಕ್ರಮ ಶಂಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನಲ್ಲಿ (SCDCC) ಭಾರೀ ಅಕ್ರಮ ಶಂಕೆ ವ್ಯಕ್ತವಾದ ಬೆನ್ನಲ್ಲೇ ಭಾರತೀಯ ರಿಸರ್ವ್‌ ಬ್ಯಾಂಕ್‌ 5 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೇ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದೆ.

ಡಾ.ಎಂ.ಎನ್​ ರಾಜೇಂದ್ರ ಕುಮಾರ್ ಅಧ್ಯಕ್ಷತೆಯ ಮಂಗಳೂರು ಡಿಸಿಸಿ ಬ್ಯಾಂಕ್ (Mangaluru DCC Bank),​ ಆರ್​​ಬಿಐ ನಿಯಮ ಉಲ್ಲಂಘಿಸಿ ತನ್ನ ನಿರ್ದೇಶಕರಿಗೆ ಸಾಲ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ. ಇದು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಸೆಕ್ಷನ್ 20 ಮತ್ತು 56ನ ನಿಯಮ ಉಲ್ಲಂಘನೆಯಾಗಿದೆ.

ಆದ್ದರಿಂದ RBI ಸೆಕ್ಷನ್ 47A(1)(c), 46(4)(i), ಮತ್ತು 56 ಅನುಸಾರ ದಂಡ ವಿಧಿಸಿದೆ. 2023ರ ಮಾರ್ಚ್ 31ರಲ್ಲಿ ನಬಾರ್ಡ್ ಡಿಸಿಸಿ ಬ್ಯಾಂಕಿನ ಹಣಕಾಸು ಸ್ಥಿತಿಯ ಪರಿಶೀಲನೆ ಮಾಡಿತ್ತು. ಪರಿಶೀಲನೆ ಸಂದರ್ಭದಲ್ಲಿ ನಿಯಮ ಉಲ್ಲಂಘನೆಯ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದ್ದವು. ಆ ಬಳಿಕ ಮಂಗಳೂರು ಡಿಸಿಸಿ ಬ್ಯಾಂಕ್​​ಗೆ ಆರ್​ಬಿಐ ನೋಟೀಸ್​ ಕೂಡ ನೀಡಿತ್ತು.

ಬ್ಯಾಂಕ್ ನಿಯಮಾನುಸಾರ ಕೆಲಸ ಮಾಡದೇ ಇದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಆರ್​ಬಿಐ, ಸೆಕ್ಷನ್ 20ರಡಿ ಯಾವುದೇ ವಾಣಿಜ್ಯ ಬ್ಯಾಂಕ್ ತನ್ನ ನಿರ್ದೇಶಕರಿಗೆ ಅಥವಾ ಅವರ ಸಂಬಂಧಿತ ಸಂಸ್ಥೆಗಳಿಗೆ ಯಾವುದೇ ರೀತಿಯ ಸಾಲ ಅಥವಾ ಹಣಕಾಸು ಸಹಾಯವನ್ನು ನೀಡುವಂತಿಲ್ಲ. ಇದು ಬ್ಯಾಂಕ್​ನ ಆಡಳಿತ ಮಂಡಳಿಯ ಮೇಲೆ ಆರ್ಥಿಕ ಪ್ರಭಾವ ಬೀರುವ ಸಾಧ್ಯತೆ ಇರುವ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಹಿತಾಸಕ್ತಿಗೆ ಬ್ಯಾಂಕ್​ ಅನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಮಾಡಲಾಗಿದೆ. ಈ ನಿಯಮವನ್ನು ಪರಸ್ಪರ ಹಿತಾಸಕ್ತಿಯ ಮುನ್ಸೂಚನೆ ನಿವಾರಿಸಲು ಮತ್ತು ಗ್ರಾಹಕರ ಠೇವಣಿಗಳ ಸುರಕ್ಷತೆ ಕಾಪಾಡಲು ರೂಪಿಸಲಾಗಿದೆ ಎಂದು ಹೇಳಿದೆ.

ಅಲ್ಲದೇ ಸೆಕ್ಷನ್ 56ರಡಿ ಸಹಕಾರಿ ಬ್ಯಾಂಕ್‌ಗಳಿಗಾಗಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕೆಲವು ನಿರ್ದಿಷ್ಟ ನಿಯಮಗಳನ್ನು ಅಳವಡಿಸಲಾಗಿದೆ. ಇದು ಸಹಕಾರಿ ಬ್ಯಾಂಕ್‌ಗಳು ಸಹ ವಾಣಿಜ್ಯ ಬ್ಯಾಂಕ್‌ಗಳಂತೆ ನಿರ್ವಹಿಸಬೇಕು. ಆದರೆ ಸಹಕಾರಿ ಮೂಲಭೂತ ತತ್ವಗಳನ್ನೂ ಅನುಸರಿಸಬೇಕು ಎಂಬ ದೃಷ್ಟಿಯಿಂದ ರೂಪಿಸಲಾಗಿದೆ. ಅಂದರೆ ಸಹಕಾರಿ ಬ್ಯಾಂಕ್‌ಗಳು ತಮ್ಮ ನಿರ್ದೇಶಕರಿಗೆ ಅಥವಾ ಅವರ ಸಂಬಂಧಿತ ವ್ಯಕ್ತಿಗಳಿಗೆ ಸಾಲ ನೀಡಬಾರದು. ಅದರೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ನಿಯಮ ಉಲ್ಲಂಘಿಸಿ ಸಾಲ ನೀಡಿರುವ ಆರೋಪ ಕೇಳಿಬಂದಿದೆ. ನಿಯಮಗಳನ್ನು ಉಲ್ಲಂಘಿಸಿ ತನ್ನ ನಿರ್ದೇಶಕರಿಗೆ ಸಾಲ ಮಂಜೂರು ಮಾಡಿದೆ. ಹೀಗಾಗಿ ದಂಡ ವಿಧಿಸಿರುವ ಆರ್‌ಬಿಐ, ಡಿಸಿಸಿ ಬ್ಯಾಂಕ್ ಸಾಲಗಳ ಬಗ್ಗೆ ಉನ್ನತ ತನಿಖೆ ಸಾಧ್ಯತೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Share This Article