ಹೊತ್ತಿ ಉರಿದ ಕಟ್ಟಡ, ಬದುಕುಳಿಯಲು ಕಟ್ಟಡದಿಂದ ಹಾರಿದ ವಿದ್ಯಾರ್ಥಿಗಳು – 16 ಸಾವು

Public TV
1 Min Read

ಗಾಂಧಿನಗರ: ಗುಜರಾತ್‍ನ ಸೂರತ್ ನಗರದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 16 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಕಟ್ಟಡದ ಮೂರನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಇದ್ದು, ಶಾರ್ಟ್ ಸರ್ಕೀಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬೆಂಕಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿ ಭಾರೀ ಅನಾಹುತ ಸೃಷ್ಟಿಸಿದೆ. ಕೋಚಿಂಗ್ ಸೆಂಟರ್ ನಲ್ಲಿದ್ದ ವಿದ್ಯಾರ್ಥಿಗಳು ಪ್ರಾಣ ಉಳಿಸಿಕೊಳ್ಳಲು ಮಹಡಿಯ ಕಿಟಕಿಗಳಿಂದ ಹಾರಿದ್ದಾರೆ. ಇದರಿಂದಾಗಿ ಕೆಲ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡರೆ, ಕೆಲವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಮೃತ ವಿದ್ಯಾರ್ಥಿಗಳು 14ರಿಂದ 17 ವರ್ಷದವರಾಗಿದ್ದು, ಮೃತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಅವಘಡ ಸಂಭವಿಸಿದಾಗ ಕಟ್ಟಡದಲ್ಲಿ 50 ಜನ ವಿದ್ಯಾರ್ಥಿಗಳಿದ್ದರು. ಅವರಲ್ಲಿ 20 ಜನರನ್ನು ರಕ್ಷಿಸಲಾಗಿದೆ. ಆದರೆ ಬೆಂಕಿ ಹೆಚ್ಚುತ್ತಿದ್ದಂತೆ ವಿದ್ಯಾರ್ಥಿಗಳು ಕಟ್ಟಡದಿಂದ ಧುಮುಕಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ 25 ಅಗ್ನಿಶಾಮಕ ವಾಹನಗಳು ಬಂದಿದ್ದು, ಬೆಂಕಿ ನಂದಿಸಿವೆ. ಕಟ್ಟಡದಲ್ಲಿ 8 ಜನರ ಮೃತ ದೇಹಗಳು ಪತ್ತೆಯಾಗಿವೆ ಎಂದು ಸೂರತ್ ಮೇಯರ್ ಹೇಳಿದ್ದಾರೆ.

ಈ ಘಟನೆಯ ಬಗ್ಗೆ ಗುಜರಾತ್ ಮುಖ್ಯಮಂತ್ರಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ 4 ಲಕ್ಷ ರೂ.ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸೇರಿದಂತೆ ಅನೇಕರು ಘಟನೆ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *