Uttar Pradesh | ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಹಿಂಸಾಚಾರ – ಪ್ರಮುಖ ಆರೋಪಿಗೆ ಗುಂಡೇಟು

Public TV
2 Min Read

ಲಕ್ನೋ: ಉತ್ತರ ಪ್ರದೇಶದ (Uttar Pradesh) ಬಹ್ರೈಚ್‌ನಲ್ಲಿ (Bahraich) ದುರ್ಗಾ ಪೂಜೆ ವೇಳೆ ನಡೆದಿದ್ದ ಹಿಂಸಾಚಾರದ (Durga Puja Violence) ಪ್ರಮುಖ ರುವಾರಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸರ್ಫರಾಜ್ ಎಂದು ಗುರುತಿಸಲಾಗಿದೆ. ಆತನನ್ನು ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ. ಬಂಧನದ ವೇಳೆ ಆತ ಪರಾರಿಯಾಗಲು ಯತ್ನಿಸಿದ್ದು ಪೊಲೀಸರು ಗುಂಡೇಟು ನೀಡಿದ್ದಾರೆ. ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಸರ್ಫರಾಜ್ ಮತ್ತು ಇನ್ನೋರ್ವ ಆರೋಪಿ ತಾಲಿಬ್ ಗಾಯಗೊಂಡಿದ್ದಾರೆ. ಆರೋಪಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಭಂದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅ.13ರ ಸಂಜೆ ಉತ್ತರಪ್ರದೇಶದ ಮನ್ಸೂರ್ ಗ್ರಾಮದ ಮಹರಾಜ್‌ಗಂಜ್ ಪ್ರದೇಶದಲ್ಲಿ ದುರ್ಗಾದೇವಿ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಧ್ವನಿವರ್ಧಕ ಬಳಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಕೋಮು ಸಂಘರ್ಷ (Communal clashes) ನಡೆದಿತ್ತು. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದ. ಬಳಿಕ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಗಲಭೆಗೆ ಸಂಬಂಧಿಸಿದಂತೆ 30 ಜನರನ್ನು ವಶಕ್ಕೆ ಪಡೆಯಲಾಗಿತ್ತು.

ಘಟನೆಯಲ್ಲಿ ಮೃತಪಟ್ಟವನನ್ನು ರೆಹುವಾ ಮನ್ಸೂರ್ ಗ್ರಾಮದ ನಿವಾಸಿ ರಾಮ್ ಗೋಪಾಲ್ ಮಿಶ್ರಾ ಎಂದು ಗುರುತಿಸಲಾಗಿತ್ತು. ಮೃತರ ಕುಟುಂಬ ಶವ ಸಂಸ್ಕಾರ ಮಾಡದೇ ಆರೋಪಿಗಳ ವಿರುದ್ಧ ಧರಣಿ ನಡೆಸಿತ್ತು. ಬಳಿಕ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಕ್ರಮದ ಭರವಸೆ ನೀಡಿದ ನಂತರ ಧರಣಿ ಹಿಂಪಡೆದಿದ್ದರು. ಮರುದಿನ ಮತ್ತೆ ಉದ್ವಿಗ್ನತೆ ಉಲ್ಬಣಗೊಂಡಿತ್ತು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯನ್ನು ಖಂಡಿಸಿದ್ದರು. ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚಿಸಲು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು. ಗಲಭೆಕೋರರನ್ನು ಮತ್ತು ಘಟನೆಗೆ ಕಾರಣವಾದವರ ನಿರ್ಲಕ್ಷ್ಯವನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದರು.

Share This Article