ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್ (Dipu Das) ಅವರ ಕ್ರೂರ ಹತ್ಯೆಯ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದೂ ವ್ಯಕ್ತಿಯ ಹತ್ಯೆಗೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗಿದೆ. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಬಗ್ಗೆ ಕಳವಳ ಕೂಡ ಹೆಚ್ಚಾಗಿದೆ. ಅಧಿಕಾರಿಗಳು ಬಂಧಿತ ಆರೋಪಿಯನ್ನು ಯಾಸಿನ್ ಅರಾಫತ್ ಎಂದು ಗುರುತಿಸಿದ್ದಾರೆ. ಸಂಚು ರೂಪಿಸಿ ದಾಳಿ ನಡೆಸಿದವರಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕೊಲೆ – ವಿಧವೆ ಮೇಲೆ ಅತ್ಯಾಚಾರ, ಕೂದಲು ಕತ್ತರಿಸಿ ಕ್ರೌರ್ಯ ಮೆರೆದ ದುಷ್ಕರ್ಮಿಗಳು
ಡಿ.18 ರಂದು ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಈ ಕೊಲೆ ನಡೆದಿತ್ತು. 27 ವರ್ಷದ ದಾಸ್ ಅವರನ್ನು ಕಾರ್ಖಾನೆಯ ಮೇಲ್ವಿಚಾರಕರು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ನಂತರ ಅವರನ್ನು ಕೆಲಸದ ಸ್ಥಳದಿಂದ ಎಳೆದುಕೊಂಡು ಹೋಗಿ ಸ್ಥಳೀಯ ಗುಂಪಿಗೆ ಒಪ್ಪಿಸಲಾಗಿತ್ತು.
ದಾಸ್ ಅವರನ್ನು ಗುಂಪು ಹೊಡೆದು ಕೊಂದು, ದೇಹವನ್ನು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಿತ್ತು. ದಾಸ್‌ನ ಹಲವಾರು ಸಹೋದ್ಯೋಗಿಗಳು ಸಹ ಹಲ್ಲೆಯಲ್ಲಿ ಭಾಗವಹಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹತ್ಯೆ ನಡೆದ ತಕ್ಷಣ ಅರಾಫತ್ ಆ ಪ್ರದೇಶದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಆತನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ – 24 ಗಂಟೆಯಲ್ಲಿ ಎರಡನೇ ಕಗ್ಗೊಲೆ
ಅರಾಫತ್ ಸಮುದಾಯದಲ್ಲಿ ತನ್ನ ಪ್ರಭಾವ ಬಳಸಿ ಜನರನ್ನು ಪ್ರಚೋದಿಸಿದ್ದ. ಗುಂಪು ದಾಳಿ ನಡೆಸುವಂತೆ ಪ್ರೇರೇಪಿಸಿದ್ದ. ಈತ ಅರಾಫತ್ ಹಿಂಸಾಚಾರವನ್ನು ಪ್ರಚೋದಿಸಿದ್ದಲ್ಲದೆ, ದಾಸ್ ಅವರನ್ನು ಎಳೆದುಕೊಂಡು ಹೋಗಿ ನೇಣಿಗೆ ಹಾಕಿ ಬೆಂಕಿ ಹಚ್ಚಿದ್ದ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಒಟ್ಟು ಸಂಖ್ಯೆ 11 ಕ್ಕೆ ಏರಿದೆ.


