ಗೋಕರ್ಣದಲ್ಲಿದೆ ಗಾಂಧೀಜಿ ಚಿತಾ ಭಸ್ಮದ ಪಾತ್ರೆ!

Public TV
2 Min Read

– ಪಾತ್ರೆಯ ಹಿಂದಿದೆ ಮನ ಕಲಕುವ ಕಥೆ!

ಕಾರವಾರ: ಉತ್ತರ ಕನ್ನಡ ಜಿಲ್ಲೆಗೂ ಗಾಂಧೀಜಿ ಅವರಿಗೂ ಒಂದು ಅವಿನಾಭಾವ ಸಂಬಂಧವಿದೆ. ಕರ್ನಾಟಕದಲ್ಲಿ ಉಪ್ಪಿನ ಸತ್ಯಗ್ರಹ ನಡೆದಿದ್ದು ಇದೇ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ.

ಸ್ವತಂತ್ರ ಪೂರ್ವದಿಂದ ಹಿಡಿದು ಇಂದಿನವರೆಗೂ ಗಾಂಧಿಜೀಯವರನ್ನು ಪ್ರೀತಿಸುವವರು, ಅನುಸರಿಸುವವರು ಹೆಚ್ಚು. 30 ಜನವರಿ 1948 ರಲ್ಲಿ ಗಾಂಧಿ ಹತ್ಯೆಯಾಯಿತು. ಅಂದು ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಗಾಂಧೀಜಿಯವರ ಶವಸಂಸ್ಕಾರದ ನಂತರ ಅವರ ಅಸ್ಥಿಯನ್ನು ದೇಶದ ನಾನಾ ನದಿಗಳು ಹಾಗೂ ಪುಣ್ಯ ಕ್ಷೇತ್ರದಲ್ಲಿ ಅಸ್ತಿ ವಿಸರ್ಜನೆ ಮಾಡಲಾಯಿತು.

ಕರ್ನಾಟಕದಲ್ಲಿ ಸಹ ಅಸ್ತಿಯನ್ನು ವಿಸರ್ಜಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಗೋಕರ್ಣಕ್ಕೆ ಅವರ ಅಸ್ಥಿಯ ಒಂದು ಭಾಗವನ್ನು ತಾಮ್ರದ ಪಾತ್ರೆಯಲ್ಲಿ ಇರಿಸಿ ಅವರು ಉಪಯೋಗಿಸಿದ್ದ ಕಾದಿಯ ನೂಲನ್ನು ಸುತ್ತಿ ಅಸ್ತಿ ವಿಸರ್ಜನೆಗೆ ಕಳುಹಿಸಲಾಯಿತು. ಅಂದು ಸಾವಿರಾರು ಗಾಂಧೀಜಿ ಅಭಿಮಾನಿಗಳು ಅಸ್ತಿ ವಿಸರ್ಜನೆಯಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಅವರ ಅಸ್ತಿ ತಂದಿದ್ದ ತಾಮ್ರದ ಪಾತ್ರೆಯನ್ನು ಅಭಿಮಾನಿಗಳು ತಮಗೆ ನೀಡುವಂತೆ ಕೇಳಿಕೊಂಡರು. ಈ ಸಂದರ್ಭದಲ್ಲಿ ಅವರನ್ನು ಅನುಸರಿಸುತ್ತಿದ್ದ ಶಿವ ನರಸಿಂಹ ಬೈಲ್ಕೆರೆ ರವರು ಹರಾಜಿನಲ್ಲಿ ಪಾತ್ರೆಯನ್ನು ಪಡೆದುಕೊಂಡು ತಮ್ಮ ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದರು.

ಗಾಂಧಿ ಹೆಸರಿನಲ್ಲಿ ತಾವು ತಿನ್ನುವ ಊಟದ ತುತ್ತಲ್ಲಿ ಒಂದು ಪಾಲು ಮೀಸಲಿಡುತಿದ್ದ ಶಿವ ನರಸಿಂಹ ಬೈಲ್ಕೆರೆ ರವರು ಅವರ ಹೆಸರಲ್ಲಿ ಅಷ್ಟೋತ್ತರ ರಚಿಸಿದ್ದರು. ಕುಮಟಾ ತಾಲೂಕಿನ ಗೋಕರ್ಣದ ಶಿವ ನರಸಿಂಹ ರವರು ಅರ್ಚಕರಾಗಿದ್ದು, ಗಾಂಧೀಜಿಯವರ ಕಟ್ಟಾ ಅಭಿಮಾನಿಯಾಗಿದ್ದರು. ಮಡಿವಂತಿಕೆಯ ಅಂದಿನ ದಿನಗಳಲ್ಲೇ ದಲಿತರ ಪರವಾಗಿ ಧ್ವನಿ ಎತ್ತುವ ಜೊತೆಗೆ ಸ್ವತಂತ್ರ ಹೋರಾಟದಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರ ನಿಷ್ಠೆಗೆ ಹಾಗೂ ಸ್ವಾತಂತ್ರದ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದಕ್ಕಾಗಿ ಇಂದಿರಾಗಾಂಧಿ ಸರ್ಕಾರ ಅವರಿಗೆ ತಾಮ್ರ ಪತ್ರ ನೀಡಿ ಗೌರವಿಸಿತ್ತು.

ಶಿವ ನರಸಿಂಹ ಬೈಲ್ಕೆರೆ ರವರು ಗತಿಸಿ ಮೂವತ್ತು ವರ್ಷಗಳು ಸಂದಿದೆ. ಅವರ ಮಗ ರಾಜೀವ್ ಬೈಲ್ಕೆರೆ ರವರು ಗಾಂಧೀಜಿಯವರ ಚಿತಾ ಭಸ್ಮ ತಂದಿದ್ದ ತಾಮ್ರದ ಪಾತ್ರೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ವೇದಿಕ್ ಮ್ಯೂಸಿಯಮ್ ಎಂಬ ಚಿಕ್ಕ ವಸ್ತು ಸಂಗ್ರಹಾಲಯವನ್ನು ತಮ್ಮ ಮನೆಯಲ್ಲೇ ನಿರ್ಮಿಸಿಕೊಂಡಿದ್ದು ಸ್ವಾತಂತ್ರ ಪೂರ್ವದ ಹಾಗೂ ನಂತರದ ಹಲವು ವಸ್ತುಗಳು, ಗ್ರಂಥಗಳು ಇವರ ಸಂಗ್ರಹದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *