ಗೋಕರ್ಣ, ಮುರುಡೇಶ್ವರದಲ್ಲಿ ವಿಜ್ರಂಭಣೆಯ ಶಿವರಾತ್ರಿ ಆಚರಣೆ

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಗೋಕರ್ಣ ಹಾಗೂ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಭಕ್ತರು ಶಿವರಾತ್ರಿ ಉತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿ ಶಿವನ ದರ್ಶನ ಪಡೆದರು.

ಗೋಕರ್ಣದಲ್ಲಿ ಆತ್ಮಲಿಂಗ ಅಭಿಷೇಕಕ್ಕೆ ಮಾತ್ರ ಅವಕಾಶ:
ಗೋಕರ್ಣದಲ್ಲಿ ಸೋಮವಾರ ಮಧ್ಯರಾತ್ರಿಯಿಂದಲೇ ಸೇರಿದ್ದ ಭಕ್ತರು, ಸಮುದ್ರ, ಕೋಟಿತೀರ್ಥದಲ್ಲಿ ಸ್ನಾನ ಮಾಡಿ ಮಹಾಬಲೇಶ್ವರ ದೇವರ ಸನ್ನಿಧಿಯಲ್ಲಿ ಸಾಲುಗಟ್ಟಿ ನಿಂತ ಭಕ್ತರು ಮಹಾಗಣಪತಿ ಮತ್ತು ಮಹಾಬಲೇಶ್ವರನಿಗೆ ಪೂಜೆ ಅರ್ಪಿಸಿದರು. ಸ್ಥಳೀಯರು ಬೆಳಗ್ಗೆ ಆತ್ಮಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಕೋವಿಡ್ ನಿಯಮ ಸಡಿಲಿಸಿದ ಕಾರಣ ಮಹಾರಾಷ್ಟ್ರ ಮತ್ತು ಗೋವಾದಿಂದ ಹೆಚ್ಚಿನ ಭಕ್ತರು ಇಂದು ಆಗಮಿಸಿದ್ದರು. ಇದನ್ನೂ ಓದಿ: ಶಿವರಾತ್ರಿ ಪ್ರಯುಕ್ತ ಜೆಪಿ ಪಾರ್ಕ್‌ನಲ್ಲಿ ಅಹೋರಾತ್ರಿ ಕಾರ್ಯಕ್ರಮ – 1 ಸಾವಿರ ಸಾಧಕರಿಗೆ ಸನ್ಮಾನ

ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗಕ್ಕೆ ಮೇಲಿನಿಂದ ಅಭಿಷೇಕ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿತ್ತು. ಸ್ಪರ್ಶಿಸಿ ನಮಸ್ಕರಿಸಲು ಆಗದ ಕಾರಣ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಪಾಣಪೀಠಕ್ಕೆ ಕಾಲು ತಗುಲಬಾರದು ಎಂದು ಸುತ್ತಲೂ ಪರದೆ ಅಳವಡಿಸಲಾಗಿತ್ತು. ಸ್ವಲ್ಪ ಎತ್ತರಿಸಿದ್ದ ಕಾರಣ ಕೈಯಿಂದ ಆತ್ಮಲಿಂಗ ಮುಟ್ಟಲು ಭಕ್ತರಿಗೆ ಸಾಧ್ಯವಾಗಲಿಲ್ಲ. ಭಕ್ತರಿಗೆ ವಿಶೇಷ ಪೂಜೆಗೂ ಅವಕಾಶ ನಿರಾಕರಿಸಲಾಗಿತ್ತು. ಕೇವಲ ನೀರು, ಬಿಲ್ವಪತ್ರೆ, ಹಾಲು ಎರೆಯಲು ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

ಮುರುಡೇಶ್ವರದಲ್ಲಿ ಜಾತ್ರೆಯಂತೆ ಸೇರಿದ ಭಕ್ತರು:
ಧಾರ್ಮಿಕ ಕ್ಷೇತ್ರದ ಜೊತೆ ಪ್ರವಾಸಿ ಸ್ಥಳವೂ ಆಗಿರುವ ಮುರುಡೇಶ್ವರದಲ್ಲಿ ಸಾವಿರಾರು ಜನರು ಶಿವನ ದರ್ಶನ ಪಡೆದು ಪುನೀತರಾದರು. ರಾಜ್ಯ ಮತ್ತು ಹೊರ ರಾಜ್ಯದಿಂದ ಆಗಮಿಸಿದ್ದ ಸಾವಿರಾರು ಭಕ್ತರು ಮುರುಡೇಶ್ವರದ ಸಮುದ್ರದಲ್ಲಿ ಪವಿತ್ರ ಸ್ನಾನ ಮಾಡಿ ಶಿವನ ದರ್ಶನ ಪಡೆದರು. ಮುರುಡೇಶ್ವರದಲ್ಲಿ ಈ ಬಾರಿ ಪೂಜೆ ಹಾಗೂ ದರ್ಶನಕ್ಕೆ ಸಂಪೂರ್ಣ ಅವಕಾಶ ಮಾಡಿಕೊಡಲಾಗಿದ್ದು ರಾತ್ರಿ ಕೂಡ ವಿಶೇಷ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಮಹಾಶಿವರಾತ್ರಿ ಹಬ್ಬದ ದಿನ ಉಪವಾಸ ಏಕೆ ಮಾಡ್ತಾರೆ?

Share This Article
Leave a Comment

Leave a Reply

Your email address will not be published. Required fields are marked *