ರಾಯಚೂರು: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟವಾದ ಉತ್ತರರಾಧನೆ ಮಂತ್ರಾಲಯದಲ್ಲಿ (Mantralaya) ಅದ್ದೂರಿಯಾಗಿ ನಡೆಯುತ್ತಿದೆ. ಮಠದ ರಾಜ ಬೀದಿಯಲ್ಲಿ ನಡೆದ ಮಹಾರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ಆರಾಧನಾ ಸಂಭ್ರಮಕ್ಕೆ ಸಾಕ್ಷಿಯಾದರು.
ಗುರು ರಾಘವೇಂದ್ರ ಸ್ವಾಮಿಗಳು (Guru Raghavendra Swamy) ವೃಂದಾವನಸ್ಥರಾದ ಮರುದಿನವನ್ನ ಮಂತ್ರಾಲಯದಲ್ಲಿ ಉತ್ತರರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆರಾಧಾನಾ ಮಹೋತ್ಸವದ ಕೊನೆಯ ಘಟ್ಟ ಉತ್ತರರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಿತು. ರಾಯರು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜಬೀದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನೋ ಪ್ರತೀತಿಯಿದೆ. ಗುರುರಾಯರನ್ನ ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಇದನ್ನೂ ಓದಿ: ರಾಜಣ್ಣ ಮಾಡಿದ ಘೋರ ಅಪರಾಧವೇನು? ಸಿಎಂ ಸದನದಲ್ಲಿ ಉತ್ತರಿಸಲಿ: ವಿಜಯೇಂದ್ರ ಆಗ್ರಹ
ಮಹಾರಥೋತ್ಸವಕ್ಕೂ ಮುನ್ನ ರಾಮದೇವರು ಮತ್ತು ಎಲ್ಲಾ ಬೃಂದಾವನಗಳಿಗೂ ಗುಲಾಲ್ ಸಮರ್ಪಣೆ ಮಾಡುವ ಮೂಲಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಂಗಿನ ಹಬ್ಬ ವಸಂತೋತ್ಸವ ಆಚರಿಸಿದರು. ಬಳಿಕ ಮಠದ ಮದ್ವದ್ವಾರದ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿದರು. ಇದೇ ವೇಳೆ ನೆರೆದಿದ್ದ ಭಕ್ತರನ್ನ ಉದ್ದೇಶಿಸಿ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿದರು. ದೇಶದ ರಕ್ಷಣೆ ಎಲ್ಲರ ಕರ್ತವ್ಯ, ಪರದೇಶಿಗಳು ನಮ್ಮ ಮೇಲೆ ದಾಳಿ ಮಾಡುವುದು ಅತ್ಯಂತ ಖಂಡನೀಯ. ಹಿಂದೂ ಧರ್ಮ ಶ್ರೇಷ್ಠವಾದ ಧರ್ಮ ನಾವೆಲ್ಲ ಜಾಗೂರಕರಾಗಿರಬೇಕು. ಧರ್ಮ, ದೇಶದ ರಕ್ಷಣೆಗೆ ನಾವೆಲ್ಲ ಕಟುಬದ್ಧರಾಗಿರಬೇಕು ಎಂದು ಸಂದೇಶ ನೀಡಿದರು. ಇದನ್ನೂ ಓದಿ: 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟ – ಮಂತ್ರಾಲಯ ರಾಜಬೀದಿಯಲ್ಲಿಂದು ಮಹಾರಥೋತ್ಸವ
ರಾಯರು ಪ್ರತಿನಿತ್ಯದಲ್ಲಿ ಅಂತರ್ಮುಖವಾಗಿ ಜಪತಪ ಮಾಡುತ್ತಿದ್ದರೆ ಉತ್ತರರಾಧನೆ ದಿನ ಬಹಿರ್ಮುಖವಾಗಿ ತಮ್ಮ ದೃಷ್ಟಿಯನ್ನ ಭಕ್ತರ ಕಡೆಗೆ ಹರಿಸುತ್ತಾರೆ. ಭಕ್ತರ ಬೇಡಿಕೆ ಈಡೇರಿಸುತ್ತಾರೆ ಅನ್ನೋ ನಂಬಿಕೆಯಿದೆ. ಹೀಗಾಗಿ ಉತ್ತರರಾಧನೆ ದಿನ ರಾಯರ ಅನುಗ್ರಹಕ್ಕೆ ಪಾತ್ರರಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಪ್ರತಿವರ್ಷದಂತೆ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಟಿಯನ್ನ ಮಾಡಲಾಯಿತು. ಈ ಮೂಲಕ ರಾಯರ ಆರಾಧನೆಯ ಮುಖ್ಯ ಮೂರು ದಿನಗಳು ಇಂದಿಗೆ ಮುಕ್ತಾಯಗೊಳ್ಳುತ್ತವೆ. ಸಪ್ತರಾತ್ರೋತ್ಸವ ಅಂಗವಾಗಿ ಇನ್ನೂ ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.