– ಸೀಟು ಹಂಚಿಕೆ ಅಧ್ಯಯನಕ್ಕೆ 2ನೇ ಬಾರಿ ಭೇಟಿ
ಬೆಂಗಳೂರು: ಮಹಾರಾಷ್ಟ್ರ (Maharashtra) ಸರ್ಕಾರದ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಮೀರ್ ಕುಮಾರ್ ಬಿಸ್ವಾಸ್ (Samir Kumar Biswas) ಅವರು ಎರಡನೇ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಮಂಗಳವಾರ (ಅ.21) ಭೇಟಿ ನೀಡಿದ್ದಾರೆ. ರಾಜ್ಯದಲ್ಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ಪೂರ್ಣ ಮಾಹಿತಿ ಪಡೆದರು.
ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿಯನ್ನು ನೀಡಿದರು. ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ವಿಜ್ಞಾನ, ನರ್ಸಿಂಗ್ ಹೀಗೆ ಒಟ್ಟು 21 ವಿವಿಧ ಬಗೆಯ ಕೋರ್ಸ್‌ಗಳಿಗೆ ಸೀಟು ಹಂಚಿಕೆಯನ್ನು ಕೆಇಎ ಏಕಕಾಲದಲ್ಲಿ ಮಾಡುತ್ತಿದ್ದು, ಅದರ ಪೂರ್ಣ ಮಾಹಿತಿಯನ್ನು ಗದ್ಯಾಳ ಅವರು ಬಿಸ್ವಾಸ್ ಅವರಿಗೆ ಎಳೆ ಎಳೆಯಾಗಿ ವಿವರಿಸಿದರು. ಇದನ್ನೂ ಓದಿ: PGCET: 2ನೇ ಸುತ್ತಿನ ಆಪ್ಷನ್ ಎಂಟ್ರಿ ಆರಂಭ – ಕೆಇಎ
#Maharastra Admissions Regulating Authority Chairman Visits #KEA.
ಮಹಾರಾಷ್ಟ್ರ ಸರ್ಕಾರದ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಮೀರ್ ಕುಮಾರ್ ಬಿಸ್ವಾಸ್ ಅವರು ಎರಡನೇ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮಂಗಳವಾರ ಭೇಟಿ ನೀಡಿ,… pic.twitter.com/6uKqOirYys
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) October 21, 2025
ಬಿಸ್ವಾಸ್ ಅವರ ನೇತೃತ್ವದ ನಿಯೋಗ ಜೂನ್ 23ರಂದು ಕೂಡ ಕೆಇಎಗೆ ಭೇಟಿ ನೀಡಿ ಮಾಹಿತಿ ಪಡೆದಿತ್ತು. ಇವತ್ತಿನ ಭೇಟಿ ಎರಡನೇಯದಾಗಿದ್ದು ಅನೇಕ ಸಂದೇಹಗಳಿಗೆ ಪರಿಹಾರವನ್ನು ಬಿಸ್ವಾಸ್ ಅವರು ಪಡೆದರು.
ಮಹಾರಾಷ್ಟ್ರದಲ್ಲಿ ಒಟ್ಟು 61 ವಿವಿಧ ರೀತಿಯ ಕೋರ್ಸ್‌ಗಳಿಗೆ ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಇದು ಅನಗತ್ಯ ವಿಳಂಬ ಹಾಗೂ ಗೊಂದಲಕ್ಕೂ ಕಾರಣವಾಗುತ್ತಿದೆ ಎನ್ನುವ ಕಾರಣಕ್ಕೆ ಕೆಇಎ ಮಾದರಿಯನ್ನು ಅಧ್ಯಯನ ನಡೆಸಲು ಬಿಸ್ವಾಸ್ ಅವರು ಬಂದಿದ್ದಾರೆ.
ಸೀಟು ಹಂಚಿಕೆ ಪ್ರಕ್ರಿಯೆ ಮಾತ್ರವಲ್ಲದೆ, ಸೀಟು ಸಿಕ್ಕ ನಂತರವೂ ಕಾಲೇಜುಗಳಿಗೆ ವರದಿ ಮಾಡಿಕೊಳ್ಳದ ಅಭ್ಯರ್ಥಿಗಳಿಗೆ ಏನೆಲ್ಲ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ? ದಾಖಲೆ ಪರಿಶೀಲನೆ ಹಾಗೂ ಛಾಯ್ಸ್ ದಾಖಲು ಇತ್ಯಾದಿ ಅಂಶಗಳ ಬಗ್ಗೆ ಬಿಸ್ವಾಸ್ ಅವರು ಮಾಹಿತಿ ಪಡೆದರು. ಅಲ್ಲದೇ, ಈ ಕುರಿತ ಸರ್ಕಾರಿ ಅಧಿಸೂಚನೆಗಳನ್ನೂ ಅವರು ಪಡೆದರು. ಕಾಲಕಾಲಕ್ಕೆ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೈಗೊಂಡ ಕ್ರಮಗಳು ವಿನೂತನವಾಗಿವೆ ಎಂದು ಪ್ರಾಧಿಕಾರದ ಬಗ್ಗೆ ಬಿಸ್ವಾಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿ.ಎಸ್ಸಿ. ನರ್ಸಿಂಗ್, ಬಿ.ಫಾರ್ಮ, ಫಾರ್ಮ-ಡಿ ಅಂತಿಮ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ ಎಂಟ್ರಿಗೆ ಅವಕಾಶ- ಕೆಇಎ