ಬಾಳಾ ಠಾಕ್ರೆಯ ಹಿಂದುತ್ವ ಪಾಲಿಸುತ್ತೇವೆ: 40 ಶಾಸಕರ ಜೊತೆ ಸೂರತ್‌ನಿಂದ ಗುವಾಹಟಿಗೆ ಹಾರಿದ ಶಿಂಧೆ

Public TV
2 Min Read

ನವದೆಹಲಿ: ಮಹಾರಾಷ್ಟ್ರದಲ್ಲಿ ರಾಜಕೀಯ ಡ್ರಾಮಾ ಮುಂದುವರಿದಿದೆ. ಶಿವಸೇನೆ ಹಿರಿಯ ನಾಯಕ, ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ 40 ಶಾಸಕರೊಂದಿಗೆ ಸೂರತ್‍ನಿಂದ ಗುಜರಾತ್ ಪೊಲೀಸರ ಭದ್ರತೆಯೊಂದಿಗೆ ಅಸ್ಸಾಂನ ಗುವಾಹಟಿಗೆ ಆಗಮಿಸಿದ್ದಾರೆ.

ಬೆಳಗಿನ ಜಾವ ಅಸ್ಸಾಂಗೆ ಬಂದಿಳಿದ ಇವರು ಬಿಜೆಪಿ ಅಧಿಕಾರದಲ್ಲಿರುವ ಮತ್ತೊಂದು ರಾಜ್ಯದಲ್ಲಿ ಆಶ್ರಯ ಪಡೆದಿದ್ದಾರೆ. ಶಿಂಧೆ ಜೊತೆ 33 ಶಿವಸೇನೆ ಶಾಸಕರು ಮತ್ತು 7 ಮಂದಿ ಪಕ್ಷೇತರ ಶಾಸಕರು ಜೊತೆಗಿದ್ದಾರೆ.

ಸೂರತ್‌ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಿಂಧೆ, ನಾವು ಬಾಳಾ ಸಾಹೇಬ್‌ ಅವರ ಅನುಯಾಯಿಗಳು. ಬಾಳಾ ಠಾಕ್ರೆ ಅವರು ನಮಗೆ ಹಿಂದುತ್ವದ ಪಾಠ ಮಾಡಿದ್ದಾರೆ. ಆ ಸಿದ್ಧಾಂತಕ್ಕೆ ಅನುಗುಣವಾಗಿ ಈಗಿನ ಸರ್ಕಾರ ನಡೆದುಕೊಳ್ಳುತ್ತಿಲ್ಲ. ಆದರೆ ನಾವು ಶಿವಸೇನೆಯನ್ನು ತೊರೆಯುವುದಿಲ್ಲ ಎಂದು ಹೇಳಿದ್ದಾರೆ.

ಏಕನಾಥ್ ಶಿಂಧೆ ಮತ್ತು ಬಂಡಾಯ ಶಾಸಕರ ಜೊತೆ ನಡೆಸಿದ ಸಂಧಾನ ವಿಫಲವಾಗಿದ್ದು, ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಸಿದ್ಧವಾಗಿದ್ದಾರೆ ಅಂತಲೂ ತಿಳಿದು ಬಂದಿದೆ. ಶಾಸಕರು ವಾಪಸ್ ಬಾರದಿದ್ದಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಮಂಗಳವಾರ ನಡೆದ ಮಹಾವಿಕಾಸ್ ಅಘಾಡಿ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ.

ಸೂರತ್‍ನ ರೆಸಾರ್ಟ್‍ಗೆ ಉದ್ದವ್ ಠಾಕ್ರೆ ಪ್ರತಿನಿಧಿಯಾಗಿ ಮಿಲಿಂದ್ ನಾರ್ವೇಕರ್ ಏಕನಾಥ್ ಶಿಂಧೆ ಭೇಟಿಯಾಗಿದ್ದು ಸಿಎಂ ಸಂದೇಶವನ್ನು ರವಾನೆ ಮಾಡಿದ್ದಾರೆ. ಈ ಭೇಟಿ ಬಳಿಕ ಮಾತನಾಡಿರುವ ಏಕನಾಥ್ ಶಿಂಧೆ, ನಾನು ಹಿಂದುತ್ವದ ಜೊತೆಗಿದ್ದು, ಶಿವಸೇನೆಗೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಶಿವಸೇನೆ ಹಿಂದುತ್ವವನ್ನು ಮರೆತಿದೆ ಎಂದು ಆಕ್ರೋಶವನ್ನು ಹೊರ ಹಾಕಿದ್ದಾರೆ. ‌

ಶಿವಸೇನೆ ರಾಜ್ಯಸಭೆ ಸದಸ್ಯ ಸಂಜಯ್ ರಾವತ್, ಏಕನಾಥ್ ಶಿಂಧೆ ಅವರೊಂದಿಗೆ ಮಾತುಕತೆ ನಡೆದಿದೆ. ಅವರು ನಮ್ಮ ಹಳೆಯ ಗೆಳೆಯ ನಾವು ಬಿಜೆಪಿಯನ್ನು ಏಕೆ ತೊರೆದಿದ್ದೇವೆ ಎಂಬುದು ಎಲ್ಲರಿಗೂ ತಿಳಿದಿದೆ. ಏಕನಾಥ್ ಶಿಂಧೆಯೂ ಸಾಕ್ಷಿಯಾಗಿದ್ದಾರೆ ಅವರು ಮರಳುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಈ ನಡುವೆ ಕಾಂಗ್ರೆಸ್ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಉಸ್ತುವಾರಿ ಹೆಚ್.ಕೆ ಪಾಟೀಲ್, 44 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *