ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಗೇಮ್‌ ಆಡಿದ ಕೃಷಿ ಸಚಿವ – ವಿಪಕ್ಷಗಳಿಂದ ಭಾರಿ ಟೀಕೆ

Public TV
1 Min Read

ಮುಂಬೈ: ಮಹಾರಾಷ್ಟ್ರದ (Maharashtra) ಕೃಷಿ ಸಚಿವ ಮಾಣಿಕ್ರಾವ್ ಕೊಕಟೆ (Manikrao Kokate) ಅವರು ವಿಧಾನಸಭೆಯ ಅಧಿವೇಶನದಲ್ಲಿ ರಮ್ಮಿ ಆಡುತ್ತಿರುವ ದೃಶ್ಯದ ವೀಡಿಯೋ ವೈರಲ್‌ ಆಗಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.

ಆಡಳಿತಾರೂಢ ಎನ್‌ಸಿಪಿ ಮತ್ತು ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಕಿಡಿಕಾರಿವೆ. ಎನ್‌ಸಿಪಿ (ಶರದ್‌ಚಂದ್ರ ಪವಾರ್) ನಾಯಕ ರೋಹಿತ್ ಪವಾರ್ ಇಂದು ಆಡಳಿತ ಮೈತ್ರಿಕೂಟದ ವಿರುದ್ಧ ಹರಿಹಾಯ್ದಿದ್ದು, ವೈರಲ್ ವಿಡಿಯೋವನ್ನು ಬಳಸಿಕೊಂಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭ

ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಕೃಷಿ ಸಮಸ್ಯೆಗಳು ಬಾಕಿ ಉಳಿದಿದ್ದರೂ, ಪ್ರತಿದಿನ 8 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಕೃಷಿ ಸಚಿವರಿಗೆ ಬೇರೆ ಏನೂ ಮಾಡಲು ಸಾಧ್ಯವಾಗದೆ ರಮ್ಮಿ ಆಡಲು ಸಮಯ ಸಿಕ್ಕಂತೆ ಕಾಣುತ್ತಿದೆ ಎಂದು ಪವಾರ್ ವ್ಯಂಗ್ಯವಾಡಿದ್ದಾರೆ.

ಕ್ಯಾಮೆರಾ ಇದೆ ಅಂತ ಗೊತ್ತಾದಾಗ ನಾನೇಕೆ ಆಟ ಆಡಲು ಅಲ್ಲಿ ಕುಳಿತುಕೊಳ್ಳಬೇಕು? ಅಚಾನಕ್ಕಾಗಿ ಡೌನ್‌ಲೋಡ್‌ ಆಗುತ್ತಿದ್ದ ಆಟವನ್ನು ತಪ್ಪಿಸಲು ಪ್ರಯತ್ನಿಸಿದೆ. ಅದು ಸಾಧ್ಯವಾಗಲಿಲ್ಲ. ಆದರೆ, ಮುಂದೆ ಅದನ್ನು ಸರಿಪಡಿಸಿದ್ದೇನೆ ಎಂದು ಸಚಿವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಅಪೂರ್ಣ ವೀಡಿಯೊ ಬಳಸಿ ವಿರೋಧ ಪಕ್ಷವು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಅಚಾನಕ್ಕಾಗಿ ಗೇಮ್‌ ಡೌನ್‌ಲೋಡ್‌ ಆಗುವುದನ್ನು ತಪ್ಪಿಸಲು ನಾನು ಪ್ರಯತ್ನಿಸಿದ್ದೆ. ನಂತರ ಅದನ್ನು ಸರಿಪಡಿಸಿಕೊಂಡೆ’ ನೀವು ಪೂರ್ಣ ವೀಡಿಯೊವನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

‘ಈ ದಾರಿ ತಪ್ಪಿದ ಸಚಿವರು ಮತ್ತು ಸರ್ಕಾರವು ಬೆಳೆ ವಿಮೆ, ಸಾಲ ಮನ್ನಾ ಮತ್ತು ಬೆಂಬಲ ಬೆಲೆಯನ್ನು ಕೋರಿ ರೈತರು ಮಾಡುತ್ತಿರುವ ‘ಬಡ ರೈತರ ಹೊಲಗಳಿಗೆ ಒಮ್ಮೆ ಬನ್ನಿ, ಮಹಾರಾಜ್’ ಎಂಬ ಹತಾಶ ಮನವಿಯನ್ನು ಎಂದಾದರೂ ಕೇಳುತ್ತದೆಯೇ?’ ಎಂದು X ನಲ್ಲಿ ಮರಾಠಿಯಲ್ಲಿ ರೋಹಿತ್‌ ಪವಾರ್ ಪೋಸ್ಟ್ ಮಾಡಿದ್ದಾರೆ.

Share This Article