ಶಿವಸೇನೆ ಜೊತೆಗಿನ ಮೈತ್ರಿಗೆ ಸೋನಿಯಾ ಒಪ್ಪಿಗೆ

Public TV
1 Min Read

ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ಒಪ್ಪಿಗೆ ನೀಡಿದೆ ಎಂದು ಎನ್‍ಸಿಪಿ ಹೇಳಿದೆ.

ಎನ್‍ಸಿಪಿಯ ರಾಜ್ಯಸಭಾ ಸದಸ್ಯ ಮಜೀದ್ ಮೆಮನ್ ರಾಷ್ಟ್ರೀಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮೈತ್ರಿಗೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಕಳೆದ 20 ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಾ ಕೊನೆಯಾಗುವ ಸಾಧ್ಯತೆಯಿದೆ.

ಶಿವಸೇನೆ ಜೊತೆಗೆ ಮೈತ್ರಿಗೆ ಎನ್‍ಸಿಪಿ ಸಿದ್ಧವಾಗಿದ್ದರೂ ಕಾಂಗ್ರೆಸ್ ತನ್ನ ಒಪ್ಪಿಗೆ ನೀಡಿರಲಿಲ್ಲ. ನಮ್ಮ ಪಕ್ಷದ ವಿರೋಧಿ ಸಿದ್ಧಾಂತವನ್ನು ಹೊಂದಿರುವ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡರೆ ಇದರಿಂದ ನಮಗೆ ನಷ್ಟ ಎನ್ನುವ ವಿಚಾರಗಳು ಮಹಾರಾಷ್ಟ್ರ ಕೈ ನಾಯಕರಿಂದ ತೂರಿ ಬಂದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ. ಆದರೆ ಇಂದು ಸೋನಿಯಾ ಗಾಂಧಿ ಮೈತ್ರಿಗೆ ಒಪ್ಪಿದ್ದಾರೆ ಎಂದು ಎನ್‍ಸಿಪಿ ಸಂಸದ ಮಜೀದ್ ಮೆಮನ್ ಅಧಿಕೃತವಾಗಿ ತಿಳಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಿಎಂ ಪಟ್ಟ ಅಲಂಕರಿಸಬೇಕೆಂಬ ಶಿವಸೇನೆಯ ಕನಸು ನನಸಾಗಲಿದೆ.

ಮೈತ್ರಿ ಸೂತ್ರದ ಪ್ರಕಾರ ಶಿವಸೇನೆ 5 ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ತನ್ನ ಬಳಿ ಉಳಿಸಿಕೊಳ್ಳಲಿದೆ. ಜೊತೆಗೆ ಶಿವಸೇನೆ ಹಾಗೂ ಎನ್‍ಸಿಪಿ ತಲಾ 14 ಸಚಿವ ಸ್ಥಾನವನ್ನು ಹಂಚಿಕೊಳ್ಳಲಿವೆ. ಮೈತ್ರಿಯ ಭಾಗವಾಗಿರುವ ಕಾಂಗ್ರೆಸ್‍ಗೂ 12 ಸಚಿವ ಸ್ಥಾನ ಸಿಗಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅಕ್ಟೋಬರ್ 21ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಶಿವಸೇನೆ ಪಕ್ಷಗಳು 161 ಸ್ಥಾನಗಳನ್ನು ಗೆದ್ದುಕೊಂಡಿವೆ. ಬಿಜೆಪಿ 105, ಶಿವಸೇನೆ 56 ಸ್ಥಾನಗಳನ್ನು ಗೆದ್ದರೂ ಅಧಿಕಾರ ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆ ನಮಗೆ ಕೊಡಲೇಬೇಕು ಎಂದು ಶಿವಸೇನೆ ಹಠ ಹಿಡಿದಿತ್ತು. ಇದಕ್ಕೆ ಬಿಜೆಪಿ ಒಪ್ಪದ ಹಿನ್ನೆಲೆಯಲ್ಲಿ ಶಿವಸೇನೆಯೂ ಕಾಂಗ್ರೆಸ್ ಹಾಗೂ ಎನ್‍ಸಿಪಿ ಜೊತೆಗೆ ಸೇರಿ ಸರ್ಕಾರ ರಚಿಸಲು ಮುಂದಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಎನ್‍ಸಿಪಿ 54 ಸ್ಥಾನ ಹಾಗೂ ಕಾಂಗ್ರೆಸ್ 44 ಸ್ಥಾನ ಪಡೆದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *