ಕರ್ನಾಟಕದ 865 ಹಳ್ಳಿಗಳಿಗೆ ಮಹಾರಾಷ್ಟ್ರದಿಂದ 54 ಕೋಟಿ ಹಣ ಬಿಡುಗಡೆಗೆ ಆದೇಶ – ಇದು ಸ್ವಾಭಿಮಾನಕ್ಕೆ ಧಕ್ಕೆ ಎಂದ ಡಿಕೆಶಿ

Public TV
3 Min Read

ಬೆಳಗಾವಿ: ಕರ್ನಾಟಕ ರಾಜ್ಯದ 865 ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ (Maharashtra Government) 54 ಕೋಟಿ ರೂ. ಬಿಡುಗಡೆಗೆ ಆದೇಶ ಹೊರಡಿಸಿದೆ. ಇದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್ 20ರಂದು ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಬಹಿರಂಗ ಸಭೆ ನಡೆಯಲಿದೆ. ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಯಾತ್ರೆ (Bharat Jodo Yatra) ಬಳಿಕ ಮೊದಲ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಹಾತ್ಮ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿದ ಜಾಗವೇ ಬೇಕು ಅಂತಾ ಅವರು ಬೆಳಗಾವಿ (Belagavi) ಆಯ್ಕೆ ಮಾಡಿಕೊಂಡಿದ್ದಾರೆ. ಯಾವ ವಿಚಾರ ಇಟ್ಟುಕೊಂಡು ಭಾರತ್ ಜೋಡೋ ಯಾತ್ರೆ ಕೈಗೊಂಡರು ಅನ್ನೋದನ್ನ ತಿಳಿಸಲಿದ್ದಾರೆ. ಆ ಮೂಲಕ ನಮಗೆ ಶಕ್ತಿ ತುಂಬಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಡಿ.ಕೆ ಶಿವಕುಮಾರ್ ಸ್ಪರ್ಧಿಸಲಿ – ಸ್ಥಳೀಯ ಕಾಂಗ್ರೆಸ್ ನಾಯಕರ ಮನವಿ

ನಾವೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡ್ತಿದ್ದೇವೆ. ಇವತ್ತು ನಮ್ಮ ನೆಲ, ಜಲ, ಭಾಷೆ, ಗಡಿ ಇವೆಲ್ಲ ನಿಗದಿಯಾಗಿದೆ. ನಾವೆಲ್ಲ ಅಣ್ಣತಮ್ಮಂದಿರಂತೆ ಒಗ್ಗಟ್ಟಾಗಿ ಬದುಕುತ್ತಿದ್ದೇವೆ. ಗಡಿವಿವಾದ ಮಹಾಜನ್ ವರದಿಯಲ್ಲಿ ತೀರ್ಮಾನ ಆಗಿದೆ. ನಮ್ಮ ರಾಜ್ಯ ಈ ಭಾಗಕ್ಕೆ ಶಕ್ತಿ ಕೊಡಲು ಸುವರ್ಣಸೌಧ ಕಟ್ಟಿ ಈ ಭಾಗದ ಹಿತಕ್ಕಾಗಿ ಇಡೀ ರಾಜ್ಯದ ಶಾಸಕರು ಬಂದು ಇಲ್ಲಿಯ ಸಮಸ್ಯೆ ಚರ್ಚಿಸಿ ಪರಿಹಾರಕ್ಕೆ ಬಂದಿದ್ದೇವೆ. ಗಡಿ ಜಿಲ್ಲೆಯಲ್ಲಿ ಧರ್ಮ ಇರಲಿ, ಭಾಷೆ ಇರಲಿ ಯಾವುದೇ ತಾರತಮ್ಯ ಇಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ (BJP Government) ಇದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಂಬಲಿತ ಶಿವಸೇನೆ ಸರ್ಕಾರ ಇದ್ದು, ಕನ್ನಡಿಗರನ್ನು ಕೆಣಕಿ ಶಾಂತಿಭಂಗಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಸೌಹಾರ್ದಯುತ ಕೆಲಸ ಮಾಡ್ತಿದ್ದೀವಿ. ಆದರೆ ಇವತ್ತು ಮಹಾರಾಷ್ಟ್ರ ಸರ್ಕಾರ ಇಲ್ಲಿಯ 800ಕ್ಕೂ ಹೆಚ್ಚು ಹಳ್ಳಿಗಳಿಗೆ ಅನುದಾನ ಕೊಡಲು ತೀರ್ಮಾನ ಮಾಡಿದೆ. 865 ಹಳ್ಳಿಗಳಿಗೆ 54 ಕೋಟಿ ಹಣ ಬಿಡುಗಡೆಗೆ ಆದೇಶ ಹೊರಡಿಸಿದೆ. ಇದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಸಿಎಂಗೆ ಹೇಳೋದಿಷ್ಟೆ. ನಮ್ಮ ರಾಜ್ಯದ ಸ್ವಾಭಿಮಾನವನ್ನ ನೀವು ಅಡ ಇಟ್ಟಿದ್ದೀರಿ. ನಿಮ್ಮ ಅಧಿಕಾರಕ್ಕಾಗಿ ಯಾರೂ ಬೇಕಾದರೂ ಇಲ್ಲಿ ಆಡಳಿತ ನಡೆಸಬಹುದು ಅಂದುಬಿಟ್ಟಿದ್ದೀರಿ. ಕೂಡಲೇ ರಾಜ್ಯಪಾಲರು ಬಿಜೆಪಿ ಸರ್ಕಾರವನ್ನ ವಜಾ ಮಾಡಬೇಕು. ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ಬೆಂಬಲ ಕೊಡುತ್ತಿದೆ. ಸಂವಿಧಾನದ ಆರ್ಟಿಕಲ್ 356 ಪ್ರಕಾರ ಮಹಾರಾಷ್ಟ್ರ ಸರ್ಕಾರವನ್ನೂ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚೀತಾ ಹೆಲಿಕಾಪ್ಟರ್ ಪತನ – ಭಾರತೀಯ ಸೇನೆಯ ಇಬ್ಬರು ಪೈಲಟ್‌ಗಳು ಹುತಾತ್ಮ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಸಹ ನಾವು ಪಂಜಾಬ್, ತಮಿಳುನಾಡು, ಕೇರಳಕ್ಕೆ ಹೋಗಿ ದರ್ಬಾರ್ ಮಾಡೋಕೆ ಆಗಲ್ಲ. ಏನಾದರೂ ಸಮಸ್ಯೆ ಇದ್ರೆ ನೀರು ಇಲ್ಲದಾಗ ನೀರು, ವಿದ್ಯುತ್ ಇಲ್ಲದಿದ್ದಾಗ ವಿದ್ಯುತ್ ಸೌಲಭ್ಯ ಕೊಡುವುದು ನಡೆದುಕೊಂಡು ಬಂದಿದೆ. ಆದ್ರೆ ಅವರ ಹಣ ತಂದು ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡೋದು ಖಂಡನೀಯ. 26 ಜನ ಲೋಕಸಭಾ ಸದಸ್ಯರು, ಈ ಭಾಗದಲ್ಲಿ 5-6 ಮಂದಿ ಸಚಿವರಿದ್ದಾರೆ. ಇವರೆಲ್ಲ ಸ್ವಾಭಿಮಾನ ಉಳಿಸಿಕೊಳ್ಳಲು ಪ್ರಯತ್ನ ಮಾಡಿಲ್ಲ. ಅವರೆಲ್ಲ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರವನ್ನ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *